Mysore
19
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕೋಟೆಕೆರೆ : ಕಾಡುಪ್ರಾಣಿಗಳ ಹಾವಳಿಗೆ ಬ್ರೇಕ್‌ ಹಾಕುವಂತೆ ಗ್ರಾಪಂ ಮುಂಭಾಗ ಪ್ರತಿಭಟನೆ

ಕೋಟೆಕೆರೆ ಗ್ರಾಪಂ ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ

ಬೇಗೂರು(ಗುಂಡ್ಲುಪೇಟೆ ತಾ.): ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಸಮೀಪದ ಕೋಟೆಕೆರೆ ಗ್ರಾಮಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡ ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಮೆರವಣಿಗೆ ನಡೆಸಿ, ನಂತರ ಗ್ರಾಪಂ ಕಚೇರಿ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ಸ್ಥಳಕ್ಕೆ ಆಗಮಿಸಿದ ತಾಪಂ ಇ.ಒ ಶ್ರೀಕಂಠರಾಜೇಅರಸ್, ಪಿಡಿಒ ಶಾಂತರಾಜು, ಸೆಸ್ಕ್ ಎ.ಇ.ಇ ರಾಮಚಂದ್ರ ರಾವ್, ಓಂಕಾರ ಅರಣ್ಯವಲಯದ ಆರ್.ಎಫ್.ಓ. ಸತೀಶ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು.
ಕಾಡಂಚಿನ ಗ್ರಾಮಗಳಿಗೆ ಕಾಡಾನೆ ಜಿಂಕೆ, ಕರಡಿ, ಚಿರತೆ ಸೇರಿದಂತೆ ಮತ್ತಿತರ ಪ್ರಾಣಿಗಳು ನಾಡಿನತ್ತ ಧಾವಿಸುತ್ತಿದ್ದು ಬೆಳೆಗಳನ್ನು ಹಾಳುಮಾಡುತ್ತಿವೆ. ಜೊತೆಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ರಾತ್ರಿವೇಳೆ ವಾಚರ್‌ಗಳು ಗಸ್ತು ತಿರುಗದೆ ಇರುವುದರಿಂದ ಕಾಡಾನೆಗಳು ಜಮೀನಿನತ್ತ ಧಾವಿಸಿ ಬೆಳೆಗಳನ್ನೆಲ್ಲ ತಿಂದುಹಾಕುತ್ತಿವೆ ಎಂದು ಆರೋಪಿಸಿದರು.

ರೈತರ ನೀರಾವರಿ ಜಮೀನಿಗೆ ಟಿ.ಸಿ.ದುರಸ್ತ್ತಿಗೆ 10 ರಿಂದ 15 ದಿನ ಕಾಯಿಸುವುದರಿಂದ ಬೆಳೆ ಒಣಗಿಹೋಗುತ್ತದೆ. ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಅವರು ಗ್ರಾಮಕ್ಕೆ ಸೌಲಭ್ಯವನ್ನು ಒದಗಿಸುವಲ್ಲಿ ನಿರ್ಲಕ್ಷಿಸುತ್ತಿದ್ದಾರೆ. ಚರಂಡಿ, ರಸ್ತೆ, ಕುಡಿಯುವ ನೀರಿನ ಕೈ ಬೋರ್‌ಗಳು ಹದಗೆಟ್ಟಿದ್ದರೂ ದುರಸ್ತಿಪಡಿಸುತ್ತಿಲ್ಲ ಎಂದು ಆರೋಪಿಸಿದರು.

ಇ-ಸ್ವತ್ತು ನೀಡಲು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಗಣರಾಜ್ಯೋತ್ಸವದಲ್ಲಿ ಭ್ರಷ್ಟರು ಧ್ವಜಾರೋಹಣ ನೆರವೇರಿಸಬಾರದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಜಿಲ್ಲಾ ಕಾರ್ಯಾಧ್ಯಕ್ಷ ಮಹದೇವಪ್ಪ, ಕೋಟೆಕೆರೆ ಗ್ರಾಮ ಘಟಕದ ಅಧ್ಯಕ್ಷ ಮಹದೇವವನಾಯಕ ಪಿ.ಎಸ್.ಐ. ಜಗದೀಶದೂಳಶೆಟ್ಟಿ, ಉಪಾಧ್ಯಕ್ಷ ಸಿದ್ದರಾಜು, ಸೀನಾ, ಮಹದೇವನಾಯಕ ಹಾಗೂ ರೈತಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ