ಮೈಸೂರು :ನೇತಾಜಿ ನಗರದಲ್ಲಿರುವ ಗಣಪತಿ ದೇವಾಲಯದ ಆವರಣದಲ್ಲಿಂದು ಪರಿಸರ ಬಳಗದ ಸದಸ್ಯರುಗಳು ಹಾಗೂ ನೇತಾಜಿ ನಗರದ ನಿವಾಸಿಗಳು ಉತ್ತಮ ಆಡಳಿತಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪರಶುರಾಮೇಗೌಡ ಅವರು ಸತ್ಯಾಗ್ರಹ ಸಭೆಯ ಉದ್ದೇಶಗಳನ್ನು ತಿಳಿಸಿದರು. ಬಳಿಕ ಮಾತನಾಡಿದ ಶಿವಬಸಪ್ಪ ಅವರು ನೇತಾಜಿ ನಗರ ಮತ್ತು ಸುತ್ತ ಮುತ್ತ ಇರುವ ಹಲವಾರು ಬಡಾವಣೆಗಳ ರಸ್ತೆಗಳು ತುಂಬಾ ಹಾಳಾಗಿದ್ದು ಸಂಚಾರ ದುಸ್ತರವಾಗಿದೆ. ತುರ್ತಾಗಿ ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವ ಸಲಹೆ ಕೊಟ್ಟರು.ಶಾಸಕರು ಮತ್ತು ಅಧಿಕಾರಿಗಳನ್ನು ಬೆಂಬತ್ತಿ ನಮ್ಮ ಬಡಾವಣೆಗಳ ಕೆಲಸಗಳನ್ನು ಮಾಡಿಸಿಕೊಳ್ಳೋಣ ಎಂದು ಸವಿತಾ ಗೌಡ ಹೇಳಿದರು.
ಒಗ್ಗಟ್ಟಿನಿಂದ ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಇದಕ್ಕೆ ಪರಿಸರ ಬಳಗದ ಮಾಡಿರುವ ಕೆಲಸಗಳು ಸಾಕ್ಷಿ ಎಂದು ಲೀಲಾ ಶಿವಕುಮಾರ್ ಹೇಳಿದರು. ಮುಂದಿನ ಮಂಗಳವಾರ ನಮ್ಮ ಬಡಾವಣೆಗಳ ಕೆಲಸಗಳನ್ನು ಬೇಗ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಡ ಹಾಕೋಣ ಎಂದು ರಾಜಗೋಪಾಲ್ ಹೇಳಿದರು.
ಸತೀಶ್ ಮಹಂತ ಮಾತನಾಡಿ ಬಡಾವಣೆಯ ನಿವಾಸಿಗಳು ಆಗಾಗ್ಗೆ ಸಭೆ ಸೇರಿ ಚರ್ಚೆ ಮಾಡೋಣ ಎಂಬ ಸಲಹೆ ಕೊಟ್ಟರು.
ನೇತಾಜಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಉಮೇಶ್ ಮಾತನಾಡಿ ಇಂದಿನ ಸಭೆಯ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರಲು ಸಂಕಲ್ಪ ಮಾಡಿದರು.
ಸತ್ಯಾಗ್ರಹದಲ್ಲಿ ಪರಿಸರ ಬಳಗದ ಸದಸ್ಯರಾದ ಜವರಪ್ಪ, ಸುಶೀಲಾ, ಶ್ರೀಲಕ್ಷ್ಮಿ, ಸುಮಲತಾ, ಗಂಟಯ್ಯ ಡಾ. ಕೃಷ್ಣಮೂರ್ತಿ ಹಾಗೂ ನೇತಾಜಿ ನಗರ ನಿವಾಸಿಗಳಾದ ಕೃಷ್ಣ, ಗುರುಸ್ವಾಮಿ, ಲೋಲ ಕುಮಾರ್, ಶಿವಪ್ಪ,ಚಂದ್ರಶೇಖರ್, ಜನಾರ್ದನ, ಬಸಪ್ಪ ಸೇರಿದಂತೆ ಮೂವತ್ತೈದಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.





