ಪಿರಿಯಾಪಟ್ಟಣ: ತಾಲ್ಲೂಕಿನ ಗೋಣಿಕೊಪ್ಪ ರಸ್ತೆಯಲ್ಲಿರುವ ಸಂತ ಮರಿಯಮ್ಮ ಚರ್ಚ್‌ಗೆ ಅಪರಿಚಿತರು ನುಗ್ಗಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರೂಪಿಸಲಾಗಿದ್ದ ಬಾಲ ಯೇಸು ಪ್ರತಿಮೆಯನ್ನು ಭಗ್ನಗೊಳಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಪ್ರಾರ್ಥನೆ ಮುಗಿಸಿ ಚರ್ಚಿನ ಬಾಗಿಲು ಹಾಕಿಕೊಂಡು ತೆರಳಿದ್ದರು. ಸಂಜೆ ೬ ಗಂಟೆ ವೇಳೆ ಪ್ರಾರ್ಥನೆಗೆ ಬಂದ ಫಾದರ್ ಜಾನ್‌ಪಾಲ್ ಚರ್ಚಿನ ಬಾಗಿಲು ಮುರಿದು, ಬಾಲ ಯೇಸು ಪ್ರತಿಮೆ ಭಗ್ನಗೊಂಡಿರುವುದು, ಕಾಣಿಕೆ ಹುಂಡಿಯನ್ನು ಒಡೆದು ಹಣವನ್ನು ದೋಚಿರುವುದು ತಿಳಿದುಬಂದಿದೆ.
ನಂತರ ಫಾ.ಜಾನ್‌ಪಾಲ್ ಅವರು ಪಿರಿಯಾಪಟ್ಟಣ ಠಾಣೆಗೆ ತೆರಳಿ, ದುರುಳರು ಚರ್ಚಿಗೆ ಅಕ್ರಮವಾಗಿ ಪ್ರವೇಶ ಮಾಡಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬಾಲ ಯೇಸು ಪ್ರತಿಮೆ ಮತ್ತಿತರ ವಸ್ತುಗಳನ್ನು ನಾಶ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಇನ್‌ಸ್ಪೆಕ್ಟರ್ ಶ್ರೀಧರ್, ಎಸ್‌ಐ ಪುಟ್ಟರಾಜು ಇತರರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.