Mysore
20
overcast clouds
Light
Dark

ಹಾಡಿಗಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ: ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ

ಮೈಸೂರು : ಹಾಡಿಗಳಲ್ಲಿ ಶುದ್ಧ ಕುಡಿಯುವ ನೀರು, ಕಾಲ ಕಾಲಕ್ಕೆ ಹಾಡಿ ಜನರ ಆರೋಗ್ಯ ತಪಾಸಣೆ ಹಾಗೂ ಆಶ್ರಮ ಶಾಲೆ ಭೇಟಿ ಸೇರಿದಂತೆ ಒಟ್ಟಾರೆಯಾಗಿ ಹಾಡಿ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯಿತ್ರಿ ಅವರು ಸೂಚನೆ ನೀಡಿದರು.

ಹುಣಸೂರು ತಾಲ್ಲೂಕಿಗೆ ಭೇಟಿ ನೀಡಿದ ಅವರು, ತಾಲ್ಲೂಕಿನ ಬಿಳಿಕೆರೆ, ಚಿಲ್ಕುಂದ ಹಾಗೂ ನೇರಳಕುಪ್ಪೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅವಶ್ಯಕ ಮೂಲಭೂತ ಸೌಲಭ್ಯಗಳ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಕಂಡು ಬಂದಂತಹ ಸಾಕಷ್ಟು ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಾಡಿ ಪ್ರದೇಶಗಳಿರುವುದರಿಂದ ಇಲ್ಲಿರುವ ಪ್ರತಿ ಮನೆಗಳಿಗೂ ಜೆಜೆಎಂ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಕಾಲ ಕಾಲಕ್ಕೆ ಇಲ್ಲಿನ ಜನರಿಗೆ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಬಳಿಕ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದು, ಪಂಚಾಯಿತಿ ಮತ್ತು ಗ್ರಂಥಾಲಯ ಎರಡು ಒಂದೇ ಕಟ್ಟಡದಲ್ಲಿದ್ದುದ್ದರಿಂದ ಹೊಸದಾಗಿ ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದರೂ ಸದುಪಯೋಗ ಪಡಿಸಿಕೊಳ್ಳದ ಪಿಡಿಒ ಅವರಿಗೆ ತರಾಟೆ ತೆಗೆದುಕೊಂಡರು.

ಇದಕ್ಕೂ ಮುನ್ನ ಬಿಳಿಕೆರೆ ಮತ್ತು ಚಿಲ್ಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಿಂದ ಅನುಷ್ಠಾನವಾಗುತ್ತಿರುವ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕೆಲಸಕ್ಕಾಗಿ ಬೇರೆಡೆಗೆ ತೆರಳುವ ಮಹಿಳೆಯರ ಮನವೊಲಿಸಿ ಸ್ಥಳೀಯ ಪ್ರದೇಶದಲ್ಲಿಯೇ ನರೇಗಾದಿಂದ ಉದ್ಯೋಗ ನೀಡುವ ಮೂಲಕ ಶೇ.60ಕ್ಕೂ ಹೆಚ್ಚಿನ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಯನ್ನು ಸ್ಥಳೀಯವಾಗಿ ಹಾಗೂ ಪರಿಸರ ದೃಷ್ಟಿಯಿಂದ ಕ್ರಮ ಕೈಗೊಳ್ಳುವ ಮೂಲಕ ಗ್ರಾಮಸ್ಥರ ಸಹಕಾರದೊಂದಿಗೆ ಕ್ರಮ ಕೈಗೊಳ್ಳುವುದಾಗಿ ಪಿಡಿಒ ಅವರಿಗೆ ಸಲಹೆ ನೀಡಿದರು.

ಅಲ್ಲದೇ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಾಲಯಕ್ಕೆ ಬೇಡಿಕೆಯನ್ನು ಪಡೆದುಕೊಳ್ಳುವಂತೆ ಮತ್ತು ಸಮಪರ್ಕವಾಗಿ ಬೂದು ನೀರು ನಿರ್ವಹಣೆ ಘಟಕ, ತೆರಿಗೆ ವಸೂಲಿ, ಇ-ಸ್ವತ್ತು ನವೀಕರಣ ಮಾಡುವಂತೆ ಹೇಳಿದರು.

ಬಳಿಕ, ಸಂಜೀವಿನಿ ಸ್ವ ಸಹಾಯ ಸಂಘದಲ್ಲಿರುವ ಹಾಡಿ ಮಹಿಳೆಯರ ಮೂಲಕ ಗುಂಪು ಚಟುವಟಿಕೆ ನಡೆಸಿ, ಕಾಡಿನ ಉತ್ಪನ್ನಗಳಾದ ಜೇನು, ಬೆಟ್ಟದ ನೆಲ್ಲಿಕಾಯಿ ಮತ್ತು ಕಾರೇಹಣ್ಣನು ಸಂಗ್ರಹಿಸಿ ಅದರ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಕೆಗೆ ಮುಂದಾಗುವಂತೆ ಸಲಹೆ ನೀಡಿದರು.

ಈ ಕುರಿತು ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನಮತಿ ದೊರಕಿಸಿಕೊಡಲಾಗುವುದು ಎಂದು ಹೇಳಿದರು. ಬಳಿಕ ಒಕ್ಕೂಟದಿಂದ ಸಾಲ ಪಡೆದ ಸಂಘದ ಸದಸ್ಯರಾದ ಚಲಾವತಿ ಅವರ ಟೈಲರಿಂಗ್ ಮತ್ತು ಫ್ಯಾನ್ಸಿ ಸ್ಟೋರ್ಗೆ ಭೇಟಿ ನೀಡಿದರು.

ಕೂಸಿನ ಮನೆ ಕೇರ್ ಟೇಕರ್ ತರಬೇತಿ ಕಾರ್ಯಕ್ರಮದಲ್ಲಿ ಭೋದನೆ ಮಾಡಿದ ಸಿಇಒ
ಸಾಕಷ್ಟು ಮಹಿಳೆಯರಿಗೆ ದುಡಿಯುವ ಅವಶ್ಯಕತೆ ಇದ್ದರೂ ಸಹ ಮನೆಯಲ್ಲಿರುವ ಸಣ್ಣ ಮಕ್ಕಳಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.

ಇಂತಹ ಪೋಷಕರಿಗಾಗಿ ಸಹಾಯವಾಗುವ ನಿಟ್ಟಿನಲ್ಲಿ ಕೂಸಿನ ಮನೆ ಪ್ರಾರಂಭವಾಗುತ್ತಿದ್ದು, ಇದರ ಅವಶ್ಯಕತೆಯನ್ನು ಸೃಷ್ಟಿಸುವಲ್ಲಿ ಆರೈಕೆದಾರರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.

ಹುಣಸೂರು ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆ ಪ್ರಾರಂಭಕ್ಕೆ ಸಿದ್ಧವಾಗುತ್ತಿದ್ದು, ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 7 ದಿನಗಳ ಕಾಲ ನಡೆಯಲಿರುವ ಆರೈಕೆದಾರರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರೈಕೆದಾರರನ್ನುದ್ದೇಶಿಸಿ ಬೋಧನೆ ಮಾಡಿದರು.

ಈ ವೇಳೆ ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಲಾಲನೆ, ಪಾಲನೆಗಾಗಿ ಕೂಸಿನ ಮನೆ ಪ್ರಾರಂಭವಾಗುತ್ತಿದ್ದು, ಆಯ್ಕೆಯಾಗಿರುವ ಆರೈಕೆದಾರರು ಹೆಚ್ಚು ತಾಳ್ಮೆ, ಸಹನೆ, ಶ್ರದ್ಧೆ, ಪ್ರೀತಿ ಹಾಗೂ ವಾತ್ಸಲ್ಯದಿಂದ ಮಕ್ಕಳನ್ನು ನೋಡಿಕೊಳ್ಳಬೇಕು ಎಂದರು.

ಅಲ್ಲದೇ ಚಟುವಟಿಕೆಯಿಂದ, ಆಗೋಗ್ಯಕರವಾಗಿ ಹಾಗೂ ಆತ್ಮೀಯ ವಾತಾವರಣವನ್ನು ನಿರ್ಮಿಸುವ ಮೂಲಕ ಕೂಸಿನ ಮನೆಯನ್ನು ನಿರ್ವಹಿಸುವಂತೆ ಸಲಹೆ ನೀಡಿದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಬಿ.ಕೆ. ಮನು, ಎಇಇ ನರಸಿಂಹಯ್ಯ, ಎಸ್.ಬಿ.ಎಂ. ಸಂಯೋಜಕರಾದ ಸವಿತಾ, ಅಧ್ಯಕ್ಷರಾದ ಗೀತಾ, ಶ್ವೇತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಾದ ದೇವರಾಜು, ಮಹದೇವಸ್ವಾಮಿ ಹಾಗೂ ರವಿ ಸೇರಿದಂತೆ ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ