Mysore
24
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ನನ್ನನ್ನು ಕೇಳಲು ನೀನ್ಯಾರು: ಪ್ರತಾಪ್‌ ವಿರುದ್ಧವೂ ವಿಶ್ವನಾಥ್‌ ಆಕ್ರೋಶ

ಮೈಸೂರು: ನಾನು ಮಾತನಾಡಿರುವುದು ಸರಿಯೋ ತಪ್ಪೋ? ಕೇಳಲು ರಾಜ್ಯಾಧ್ಯಕ್ಷರು ಇದ್ದಾರೆ.ನನ್ನನ್ನು ಪಕ್ಷ ಬಿಡು ಎನ್ನಲು ನೀನ್ಯಾರು? ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಏಕವಚನದಲ್ಲಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಸದ ಪ್ರತಾಪ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ವಿ.ಶ್ರೀನಿವಾಸಪ್ರಸಾದ್ ವಿರುದ್ಧದ ವಿಶ್ವನಾಥ್‌ ಅವರ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಸದ ಪ್ರತಾಪ ಸಿಂಹ, ಚಾಮರಾಜನಗರ ಸಂಸದರು ಜಾತಿಗಳನ್ನು ಮೀರಿ ಬೆಳೆದವರು. ಪ್ರಶ್ನಾತೀತವಾಗಿ ಗೌರವಿಸುವ ವ್ಯಕ್ತಿ. ರಾಜಕಾರಣಿಗಳಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿರುವ ವ್ಯಕ್ತಿಯ ಕುರಿತು ಮಾತನಾಡಿದ್ದು ಬೇಸರ ತಂದಿದೆ. ವಿಶ್ವನಾಥ್ ಅವರಿಗೆ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು ಅಪಥ್ಯ ಎನ್ನಿಸಿದರೆ ಬೇರೆ ದಾರಿ ಕಂಡುಕೊಳ್ಳಬೇಕೇ ಹೊರತು ಪಕ್ಷದಲ್ಲಿದ್ದುಕೊಂಡು ಚುಚ್ಚುವ ಕೆಲಸ ಮಾಡಬಾರದು ಎಂದು ಸಂಸದರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್ “ನೀನೇನು ಪಕ್ಷ ರಾಜ್ಯಾಧ್ಯಕ್ಷನೇ, ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿನಗೇನಿದೆ?.ನೀನೆ ಸರಿಯಿಲ್ಲ, ಬೇರೆಯವರಿಗೆ ಬುದ್ದಿ ಹೇಳುವ ಕೆಲಸ ಮಾಡುತ್ತಿದ್ದೀಯ,ಬೇರೆಯವರು ಮಾಡಿರುವ ಕೆಲಸವನ್ನು ನಾನೇ ಮಾಡಿದ್ದು ಅಂತ ಹೇಳಿಕೊಂಡು ತಿರುಗಾಡುತ್ತಿದ್ದೀಯಾ. ಆಸ್ಕರ್ ಫರ್ನಾಂಡಿಸ್ ಅವರು ಕೇಂದ್ರ ಸಚಿವರಾಗಿದ್ದ ಕಾಲದಲ್ಲಿ ಮಂಜೂರಾಗಿದ್ದ ರಸ್ತೆ ಕಾಮಗಾರಿಯನ್ನು ನಾನು ಮಾಡಿಸಿದೆ ಅಂತೀಯಾ, ನಾಚಿಕೆ ಆಗಬೇಕು ನಿನಗೆʼʼ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಯಾರ್ರೀನ, ಅವರಿಗೆ ಮರ್ಯಾದೆ ಇದೆಯಾ, ಅವರಿಗೆ ಕೊಟ್ಟ ಖಾತೆಯನ್ನೇ ಸರಿಯಾಗಿ ನಿಭಾಯಿಸಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತಹ ಪಾರ್ಟಿಯಲ್ಲ ಎನ್ನಲಾಗುತ್ತಾ? ಇಂದಿರಾಗಾಂಧಿ ಮನೆ ಮ್ಯೂಸಿಯಂ ಆಗಿದೆ. ಅವರ ಮನೆಯ ದೇವರ ಕೋಣೆಯಲ್ಲಿ ದೇವರ ಫೋಟೊಗಳಿರಲಿಲ್ಲ. ಭಾರತದ ಭೂಪಟ ದೇವರ ಕೋಣೆಯಲ್ಲಿತ್ತು. ಇಂದಿರಾಗಾಂಧಿ ಅಪ್ಪಟ ದೇಶ ಭಕ್ತರು ಎಂದು ಕಾಂಗ್ರೆಸ್ ಪಕ್ಷದ ಮೃದು ಧೋರಣೆಯಿಂದ ಮಾತನಾಡಿದರು.
ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ ಹೋಗೋ ಸಂದರ್ಭ ಬಂದರೆ ಹೋಗ್ತೀನಿ, ಇರೋ ಸಂದರ್ಭ ಬಂದರೆ ಇರ್ತೀನಿ ಎಂದು ಉತ್ತರಿಸಿದರು.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡ ವಿಶ್ವನಾಥ್, ನಾನು ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ತಪ್ಪುಗಳ ಬಗ್ಗೆಯೂ ಮಾತನಾಡುತ್ತೇನೆ. ನನ್ನ ಝಂಡಾ ಬದಲಾದರೂ ಅಜೆಂಡಾ ಬದಲಾಗುವುದಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ತಪ್ಪೇನಿದೆ?ನೀವು ಮತದಾರರ ಪಟ್ಟಿಯನ್ನೇ ಬದಲಾಯಿಸುತ್ತಿದ್ದೀರಿ, ನಾಚಿಕೆ ಆಗಲ್ವಾ. ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗೆ ಹೆಚ್ಚಿನ ಮಹತ್ವವಿದೆ.ಆದರೆ ನೀವು ಮತದಾರರ ಪಟ್ಟಿ ಬದಲಾಯಿಸುವ ಮೂಲಕ ಜನರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳಲು ಹೊರಟಿದ್ದೀರಿ.ಮುಖ್ಯಮಂತ್ರಿಯಾದಿಯಾಗಿ ಬಿಜೆಪಿಯವರೆಲ್ಲರೂ ಸುಳ್ಳು ಹೇಳುತ್ತಾರೆ.ಮತದಾರರ ಹಕ್ಕು ಕಸಿಯಲು ಮುಂದಾದ್ದನ್ನು ಶಿವಕುಮಾರ್ ಪ್ರಶ್ನಿಸಿದ್ದರಲ್ಲಿ ತಪ್ಪೇನು. ಹಾಗಂತ ಯಾರು ಕೂಡಾ ಭಯೋತ್ಪಾದಕರ ಬೆನ್ನು ತಟ್ಟುತಿಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!