ಮೈಸೂರು: ಕೋಮು ಸೌಹಾರ್ದತೆ ಕೆಡಿಸುತ್ತಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಸಮಾಜದಲ್ಲಿ ಸೌಹಾರ್ದತೆ ಕಾಪಾಡಬೇಕು ಎಂದು ಕರ್ನಾಟಕ ನ್ಯಾಯಪರ ವೇದಿಕೆ ಆಗ್ರಹಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಗಿರೀಶ್ ಶಿವಾರ್ಚಕ, ಕೆ.ಆರ್.ಕ್ಷೇತ್ರದಲ್ಲಿ ನಿರ್ಮಿಸಿರುವ ಬಸ್ ತಂಗುದಾಣದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಗುಂಬಸ್ ರೀತಿಯಲ್ಲಿ ಕಾಣುತ್ತಿದೆ. ಅದನ್ನು ನಾನೇ ಸ್ವತಃ ಜೆಸಿಬಿಯಿಂದ ತೆರವುಗೊಳಿಸಿತ್ತೇನೆ ಎಂದು ಹೇಳಿಕೆ ನೀಡಿರುವುದು ಕೋಮು ಸೌಹಾರ್ದತೆಗೆ ಧಕ್ಕೆ ತಂದಿದೆ. ಮತಕ್ಕಾಗಿ ಪ್ರತಾಪ್ ಸಿಂಹ ಅವರು ಕೋಮು ಸೌಹಾರ್ದತೆಯನ್ನು ಹಾಳು ಮಾಡಿ ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತುವ ಹುನ್ನಾರ ನಡೆಸುತ್ತಿದ್ದು, ಅತಿರೇಖದ ಹೇಳಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದರಿಂದ ಸಮಾಜದಲ್ಲಿ ಶಾಂತಿಗೆ ಭಂಗವಾಗಿದೆ. ಇದೇ ರೀತಿಯ ಹೇಳಿಕೆಗಳನ್ನು ಹೋರಾಟಗಾರರು ಅಥವಾ ಸಾಮಾನ್ಯನೊಬ್ಬ ನೀಡಿದ್ದರೆ. ದೂರು ದಾಖಲಿಸಿ ಕ್ರಮ ಜರುಗಿಸುತ್ತಿದ್ದರು. ಆದರೆ, ಇನ್ನೂ ಪ್ರತಾಪ್ ಸಿಂಹ ಅವರ ವಿರುದ್ಧ ದೂರು ದಾಖಲಾಗಿಲ್ಲ. ಇದು ಜನಸಾಮಾನ್ಯರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು ಇದೀಯೆ? ಎಂಬ ಪ್ರಶ್ನಿಸಿದರು.
ಕೂಡಲೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಮತ್ತು ಸಂಸದ ಪ್ರತಾಪ್ ಸಿಂಹ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗಿರೀಶ್, ರಾಕೇಶ್ ರವಿ, ಶಂಕರ, ರಾಚಪ್ಪ, ಪುಟ್ಟಯ್ಯ, ಸೋಮು, ಪ್ರಕಾಶ್, ಮೋಹನ್ ನಾಣಿ, ಕೃಷ್ಣ, ಶಿವಕುಮಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.