ಮೈಸೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ವೇಳೆ ವಿಮಾನಗಳಿಗೆ ಲೇಸರ್ ಲೈಟ್ ಬಿಟ್ಟು ಅಡೆಚಣೆ ಉಂಟುಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರ ಪೊಲೀಸ್ ಇಲಾಖೆಗೆ ಮಾಹಿತಿಯನ್ನೂ ಸಹ ನೀಡಿ ಹಾವಳಿ ತಪ್ಪಿಸುವಂತೆ ಮನವಿ ಮಾಡಿತ್ತು.
ಇದರ ಕುರಿತಾಗಿ ಇದೀಗ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿದ್ದಾರೆ. ನಗರದಲ್ಲಿ ನಡೆದ ಚಾಮುಂಡಿ ಪಡೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಬಾನೋತ್ ಲೇಸರ್ ಹಾವಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದ ಪೊಲೀಸ್ ಠಾಣೆಗೂ ಸಹ ಈ ಕುರಿತು ಸೂಚನೆ ನೀಡಿದ್ದೇವೆ ಎಂದಿದ್ದಾರೆ. ಅಲ್ಲದೇ ಮಕ್ಕಳು ಲೇಸರ್ ಲೈಟ್ ಬಿಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಪ್ರಕರಣದ ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ಯಾರು ಲೇಸರ್ ಲೈಟ್ ಬಿಡುತ್ತಿದ್ದಾರೆ ಎಂಬ ಅಂಶ ತಿಳಿದ ನಂತರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.