ಮೈಸೂರು: ದಸರಾ ಉತ್ಸವಕ್ಕೆ ಬಂದಿದ್ದ ಆನೆಗಳ ತಂಡದಲ್ಲಿ ಲಕ್ಷ್ಮೀ ಎಂಬ ಆನೆಯು ಮಂಗಳವಾರ ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು, ಅರಮನೆ ಆವರಣದಲ್ಲಿ ಸಂಭ್ರಮ ಮನೆಮಾಡಿದೆ.
ಧರ್ಮಸ್ಥಳದ ದೇವಸ್ಥಾನದಲ್ಲಿ ಇದ್ದ ಈ ಆನೆಯನ್ನು ಅರಣ್ಯ ಇಲಾಖೆ ಆದೇಶ ಮೇರೆಗೆ ನಾಗರಹೊಳೆಯ ಅರಣ್ಯಕ್ಕೆ ಕರೆತರಲಾಗಿತ್ತು. ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯೊಂದಿಗೆ ಲಕ್ಷ್ಮೀಯನ್ನೂ ನಗರಕ್ಕೆ ಕರೆತರಲಾಗಿತ್ತು. ಮಂಗಳವಾರ ರಾತ್ರಿ 11 ಗಂಟೆಗೆ ಸಮಯದಲ್ಲಿ ಗಂಡು ಮರಿಗೆ ಜನ್ಮ ನೀಡಿದೆ. ದಸರಾ ಉತ್ಸವಕ್ಕೆ ಬಂದ ಆನೆಗಳ ಪೈಕಿ ಕಳೆದ 12 ವರ್ಷಗಳ ನಂತರ ಅರಮನೆಯಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಿದ್ದು ಸಂತಸ ತಂದಿದೆ. ತಾಯಿ ಹಾಗೂ ಮರಿ ಆರೋಗ್ಯವಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ದಸರಾ ತಯಾರಿಯಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ಜನರ ವೀಕ್ಷಣೆಯನ್ನು ಸಹ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.