Mysore
17
scattered clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಪಿರಿಯಾಪಟ್ಟಣ: ಪೊಲೀಸರಿಂದ ಲಾಠಿ ಪ್ರಹಾರ ತಂಬಾಕು ಬೆಲೆ ದಿಢೀರ್ ಕುಸಿತ ಖಂಡಿಸಿ ಪ್ರತಿಭಟನೆ; ರಸ್ತೆ ತಡೆ ನಡೆಸಿ ರೈತರ ಆಕ್ರೋಶ

ಪಿರಿಯಾಪಟ್ಟಣ : ತಂಬಾಕು ಬೆಲೆ ದಿಢೀರ್ ಕುಸಿತದಿಂದ ಆಕ್ರೋಶಗೊಂಡ ರೈತರು ಉತ್ತಮ ಬೆಲೆ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯನ್ನು ಸ್ಥಗಿತಗೊಳಿಸಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

ತಾಲ್ಲೂಕಿನ ಕಗ್ಗುಂಡಿ ಹರಾಜು ಮಾರುಕಟ್ಟೆಯಲ್ಲಿ ಬುಧವಾರ ಎಂದಿನಂತೆ ಹರಾಜು ಪ್ರಕ್ರಿಯೇ ಆರಂಭವಾಗುತ್ತಿದ್ದಂತೆ ಉತ್ತಮ ದರ್ಜೆಯ (ಗ್ರೇಡ್ ಒನ್) ತಂಬಾಕಿಗೆ ೨೩೦ ರೂ. ಹಾಗೂ ಮಧ್ಯಮ ದರ್ಜೆ ತಂಬಾಕಿಗೆ (ಮಧ್ಯಮ ದರ್ಜೆ) ೧೮೦ ರೂ.ಗಳಿಗೆ ಮಾರಾಟವಾಯಿತು. ಇದರಿಂದ ಪ್ರತಿ ಕೆಜಿಗೆ ೩೦ ಹಾಗೂ ೭೦ ರೂ. ಕಡಿಮೆಯಾಗುತ್ತಿತ್ತು. ಇದರಿಂದ ಆಕ್ರೋಶಗೊಂಡ ರೈತರು ಏಕಾಏಕಿ ತಂಬಾಕು ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿ ಹರಾಜು ಪ್ರಕ್ರಿಯೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಆಕ್ರೋಶಗೊಂಡ ರೈತರನ್ನು ಸಮಾಧಾನಪಡಿಸಲು ಯತ್ನಿಸಿದ   ತಂಬಾಕು ಹರಾಜು ಅಧೀಕ್ಷಕರ ಮಾತಿಗೂ ಕ್ಯಾರೆ ಎನ್ನದ ರೈತರು, ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಯಾವುದೇ ಸಬೂಬು ಹೇಳದೆ ಹಿಂದಿನ ದಿನದ ದರವನ್ನು ನೀಡಿ, ಇಲ್ಲದಿದ್ದರೆ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.

ಈ ವೇಳೆ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದ್ದರಿಂದ ಪ್ರತಿಭಟನಾಕಾರರಿಗೆ ರಸ್ತೆಯ ಬದಿಯಲ್ಲಿ ನಿಂತು ಪ್ರತಿಭಟನೆ ನಡೆಸಲು ಮನವಿ ಮಾಡಿದರು. ಆದರೆ, ಇದಕ್ಕೆ ರೈತರು ಜಗ್ಗದಿದ್ದಾಗ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಸುಮಾರು ೧೦ ಮಂದಿ ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಗುರುವಾರ ಬೆಳಿಗ್ಗೆ ೯ ಗಂಟೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸ್ಥಿತಿ ಅವಲೋಕಿಸಲು ಕಗ್ಗುಂಡಿ ಮಾರುಕಟ್ಟೆಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!