Mysore
23
clear sky

Social Media

ಶನಿವಾರ, 03 ಜನವರಿ 2026
Light
Dark

ಸಾರ್ವಜನಿಕರ ಕೆಲಸ ವಿಳಂಬ; ಅಧಿಕಾರಿಗಳಿಗೆ ತರಾಟೆ

ಪಾಲಿಕೆ ವಲಯ ಕಚೇರಿ ೭, ೯ಕ್ಕೆ ಮಹಾಪೌರರ ಭೇಟಿ, ಪರಿಶೀಲನೆ

ಮೈಸೂರು: ಸಾರ್ವಜನಿಕರು ಕೊಟ್ಟಿರುವ ಅರ್ಜಿಗಳನ್ನು ವಿಲೇವಾರಿ ಮಾಡದೆ, ಎರಡು-ಮೂರು ತಿಂಗಳುಗಳಿಂದ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಮಹಾಪೌರ ಶಿವಕುಮಾರ್, ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

ನಗರಪಾಲಿಕೆ ವಲಯ ಕಚೇರಿ ೭ ಮತ್ತು ೯ಕ್ಕೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಖಾತೆ ಮಾಡಿಕೊಡಲು ಸಲ್ಲಿಸಿದ್ದ ಅರ್ಜಿಗಳನ್ನು ಎರಡು ತಿಂಗಳಾದರೂ ಕೈಗೆತ್ತಿಕೊಳ್ಳದೆ ಇಟ್ಟುಕೊಂಡಿದ್ದನ್ನು ಗಮನಿಸಿದ ಮಹಾಪೌರರು ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಕೇಳಿದರು. ವಿಳಂಬ ಮಾಡಲು ಕಾರಣವೇನು? ನಿಗದಿತ ಅವಧಿಯೊಳಗೆ ಕಾನೂನಿನ ಚೌಕಟ್ಟಿನಲ್ಲಿ ಖಾತೆ ಮಾಡಿಕೊಡಲು ಸಾಧ್ಯವಾಗದಿದ್ದರೆ ಹಿಂಬರಹ ಕೊಡಬೇಕೇ ಹೊರತು ಕಚೇರಿಗೆ ಅಲೆದಾಡಿಸಬಾರದೆಂದು ಹೇಳಿದರು.

ನಿವಾಸಿಗಳು ಮನೆ ಕಂದಾಯ ಪಾವವತಿ ಮಾಡಲು ಪಾಲಿಕೆ ವಲಯ ಕಚೇರಿಗೆ ಆಗಮಿಸಿ ಕಾದು ಕುಳಿತಿದ್ದರೂ ಕಂದಾಯ ನಿರೀಕ್ಷಕರು ಇರಲಿಲ್ಲ. ಈ ವೇಳೆ ದೂರವಾಣಿ ಮೂಲಕ ವಿಚಾರಿಸಿದಾಗ ವಾರ್ಡ್‌ನಲ್ಲಿ ಸಂಗ್ರಹ ಮಾಡುತ್ತೇವೆ ಎಂಬ ಉತ್ತರ ಬಂತು. ಆಗ ಮಹಾಪೌರರು, ಕಂದಾಯ ನಿರೀಕ್ಷಕರು ಕಚೇರಿಯಲ್ಲಿ ಇಲ್ಲದ ಸಂದರ್ಭದಲ್ಲಿ ಕಂದಾಯ ಪಾವತಿ ಮಾಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಲಯ ಸಹಾಯಕ ಆಯುಕ್ತರಿಗೆ ಸೂಚಿಸಿದರು.

ಈ ವೇಳೆ ಸಾರ್ವಜನಿಕರು ಹಲವು ಸಮಸ್ಯೆಗಳ ಬಗ್ಗೆ ದೂರುಗಳನ್ನು ಸಲ್ಲಿಸಿದರು. ಇದನ್ನು ಪರಿಗಣಿಸಿದ ಮಹಾಪೌರರು, ಒಂದೊಂದು ಅರ್ಜಿಗಳನ್ನು ಪರಿಶೀಲಿಸಿ ಅನಗತ್ಯವಾಗಿ ವಿಳಂಬವಾಗಿರುವುದನ್ನು ಇತ್ಯರ್ಥಪಡಿಸಬೇಕು. ವಿಳಂಬ ಮಾಡಿರುವ ಬಗ್ಗೆ ಉತ್ತರ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಲಯ ಕಚೇರಿ ೭ರ ಸಹಾಯಕ ಆಯುಕ್ತ ನಂಜುಂಡಯ್ಯ, ವಲಯ ಕಚೇರಿ ೯ರ ಸಹಾಯಕ ಆಯುಕ್ತ ಶಿವಕುಮಾರ್ ಈ ವೇಳೆ ಹಾಜರಿದ್ದರು.

ಪಾದಯಾತ್ರೆ ವೇಳೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಅಧೀಕ್ಷಕ ಅಭಿಯಂತರ ಮಹೇಶ್, ವಾಣಿವಿಲಾಸ ವಾಟರ್ ವರ್ಕ್ಸ್‌ನ ಇಇ ಸುವರ್ಣ ಇನ್ನಿತರರು ಹಾಜರಿದ್ದರು.


ಪಾದಯಾತ್ರೆ

ಮೈಸೂರು: ನಗರಪಾಲಿಕೆ ಸದಸ್ಯೆ ಎಚ್.ಎಂ.ಶಾಂತಕುಮಾರಿ ಅವರ ವಾರ್ಡಿನಲ್ಲಿ ಮಹಾಪೌರರು, ಆಯುಕ್ತರು ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ಕುಡಿಯುವ ನೀರು, ಒಳಚರಂಡಿ, ಬೀದಿದೀಪ ಮೊದಲಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ದೂರುಗಳನ್ನು ಆಲಿಸಿದರಲ್ಲದೆ, ಒಳಚರಂಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚನೆ ನೀಡಿದರು. ಬಡಾವಣೆಯಲ್ಲಿ ಒಳಚರಂಡಿ ಪೈಪ್‌ಲೈನ್ ಅಳವಡಿಸಿದ ಮೇಲೆ ರಸ್ತೆ ದುರಸ್ತಿಪಡಿಸದ ಕಾರಣ ವಾಹನಗಳು ಓಡಾಡಲು ತೊಂದರೆಯಾಗಿರುವ ಕುರಿತು ಸ್ಥಳೀಯರು ಮಹಾಪೌರರ ಗಮನಕ್ಕೆ ತಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!