Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಪಕ್ಷಾಂತರ ಮಾಡಲು ಹಣದ ಆಮಿಷವಿತ್ತು: ವಿಶ್ವನಾಥ್ ಬಹಿರಂಗ

ಪಕ್ಷಕ್ಕೆ ಕರೆತಂದು ನಡು ನೀರಲ್ಲಿ ಕೈ ಬಿಟ್ಟರು: ಬಿಜೆಪಿ ನಾಯಕರ ವಿರುದ್ಧ ಕಿಡಿ

ಮೈಸೂರು: ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದವರನ್ನೇ ನಡು ನೀರಿನಲ್ಲಿ ಕೈಬಿಟ್ಟರು. ಆರ್‌ಎಸ್‌ಎಸ್ ಪ್ರಮುಖ ಮುಕುಂದ ಇಲ್ಲದಿದ್ದರೆ ಎಂಎಲ್‌ಸಿ ಸ್ಥಾನವೂ ಕೈತಪ್ಪಿ ನನ್ನನ್ನು ರಾಜಕೀಯವಾಗಿ ಬಲಿ ಪಡೆದುಕೊಳ್ಳುತ್ತಿದ್ದರು ಎಂದು ಬಿಜೆಪಿ ತೊರೆಯಲು ಸಿದ್ಧವಾಗಿರುವ ವಿಧಾನ ಪರಿಷತ್ ಸದಸ್ಯ ಎ.ಎಚ್‌. ವಿಶ್ವನಾಥ್‌ ದೂರಿದ್ದಾರೆ.

ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.


“” ಬಿ.ವೈ.ವಿಜಯೇಂದ್ರ ಅವರ ಅಪಾರ್ಟ್‌ಮೆಂಟ್‌ನಲ್ಲಿ ಯಡಿಯೂರಪ್ಪ ಅವರನ್ನು ಕೂರಿಸಿಕೊಂಡು ನನ್ನ ಕೈಹಿಡಿದು, ನೀವು ಹಿರಿಯರಿದ್ದೀರಿ. ನೀವು ಹೊರಬಂದರೆ ನಿಮ್ಮ ಸೀನಿಯಾರಿಟಿ ನೋಡಿಕೊಂಡು ಉಳಿದವರು ಹೊರ ಬರುತ್ತಾರೆ. ನನ್ನ ಮಾತನ್ನು ನಡೆಸಿಕೊಡಬೇಕೆಂದು ಕೇಳಿಕೊಂಡಿದ್ದಕ್ಕೆ ಹೊರ ಬರುವಂತಾಯಿತು. ಇದು ನೆನಪಿಲ್ಲವೇ ಎಂದು ಅವರು ಶ್ರೀನಿವಾಸ ಪ್ರಸಾದ್‌ ಅವರನ್ನು ಪ್ರಶ್ನಿಸಿದರು.

ಮಂತ್ರಿ ಸ್ಥಾನದಲ್ಲಿ ತಮ್ಮ ಹೆಸರು ಹೋದಾಗ ಹೊಸದಿಲ್ಲಿಯಲ್ಲಿ ತಪ್ಪಿಸಿದ್ದು ಯಾರು? ಪಟ್ಟಿಯಲ್ಲಿ ಹೆಸರು ಕಳುಹಿಸಿದ್ದರೂ ಹೈಕಮಾಂಡ್ ಕೈಬಿಟ್ಟಿದೆ ಅಂತ ಯಡಿಯೂರಪ್ಪ ಹೇಳಿದ್ರು. ನಂತರ, ಎಂಎಲ್‌ಸಿ ಕೊಡದಂತೆ ರಾಜಕಾರಣ ಮಾಡಿದರು. ವಿಜಯೇಂದ್ರ ಅವರ ಮನೆಯಲ್ಲಿ ನಡೆದ ಮಾತುಕತೆ ಏನು? ಏನೇನು ನಿರ್ಧಾರ ಆಗಿತ್ತು? ವಿಜಯೇಂದ್ರ ಅವರು ದುಡ್ಡುಕೊಡಲು ಬಂದಿದ್ದು ಗೊತ್ತಿಲ್ಲವೇ? ಈ ವಿಚಾರವನ್ನು ನಾನೇನೂ ಹೊಸದಾಗಿ ಹೇಳುತ್ತಿಲ್ಲ. ಬಾಂಬೆ ಡೇಸ್ ಪುಸ್ತಕದ ಮೊದಲ ಅಧ್ಯಾಯದಲ್ಲಿ ಇದೆ. ಪುಸ್ತಕ ಹೊರ ಬಂದಾಗ ಬಹಳಷ್ಟು ವಿಚಾರಗಳು ಬಹಿರಂಗವಾಗಲಿವೆ ಎಂದರು.

ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಶ್ರೀನಿವಾಸಪ್ರಸಾದ್. ನನಗೆ ಮಂತ್ರಿಗಿರಿಯೂ ಸಿಗದೇ ಹೋದಾಗ, ಆರ್‌ಎಸ್‌ಎಸ್‌ನ ಪ್ರಮುಖ ಮುಕುಂದ ಅವರು ಸರ್ಕಾರ ಬರಲು ವಿಶ್ವನಾಥ್ ಪಾತ್ರ ದೊಡ್ಡದಿದೆ. ಕೊಟ್ಟ ಮಾತಿನಂತೆ ಅವರನ್ನು ಎಂಎಲ್‌ಸಿ ಮಾಡುವುದು ಸೂಕ್ತವೆಂದು ಹೇಳಿದ್ದಕ್ಕಾಗಿ ಸಿಕ್ಕಿತ್ತು. ಇಲ್ಲದಿದ್ದರೆ ರಾಜಕೀಯ ಬಲಿಯಾಗಿ ರಾಜಕೀಯ ಜೀವನ ಏರುಪೇರು ಮಾಡಲಾಗುತ್ತಿತ್ತು ಎಂದು ಬಹಿರಂಗಪಡಿಸಿದರು.

“”ನನ್ನನ್ನು ಅಲೆಮಾರಿ ರಾಜಕಾರಣಿ ಎಂದು ಟೀಕಿಸಿರುವ ನೀವು ಎಷ್ಟು ಪಕ್ಷಗಳನ್ನು ಬದಲಾಯಿಸಿದ್ದೀರಿ. ನೀವು ಒಂದೇ ಪಕ್ಷವನ್ನು ಎರಡೆರಡು ಬಾರಿ ಸೇರ್ಪಡೆಯಾಗಿದ್ದೀರಿ. ನೀವು ಅಲೆಮಾರಿಗಳ ರಾಜ ಎಂದು ಶ್ರೀನಿವಾಸ ಪ್ರಸಾದ್ ವಿರುದ್ದ ಟೀಕಾಪ್ರಹಾರ ನಡೆಸಿದರು.

“” ನಾನು ಹಾಗೂ ಶ್ರೀನಿವಾಸಪ್ರಸಾದ್ ಹಳೆಯ ಸ್ನೇಹಿತರು, ಬಹು ಕಾಲದ ಒಡನಾಡಿಗಳು. ಅದೆಲ್ಲವನ್ನು ಮರೆತು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ರನ್ನು ನಾನು ಭೇಟಿ ಮಾಡಿದ್ದನ್ನೇ ಘೋರ ಅಪರಾಧ ಎಂಬಂತೆ ಬಿಂಬಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ. ಯಾರನ್ನು ಮೆಚ್ಚಿಸಲು ನನ್ನ ವಿರುದ್ದ ಮುಗಿಬಿದ್ದಿದ್ದೀರಿ. ಸಂಸತ್ ಸದಸ್ಯರಾಗಿರುವ ನೀವು ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲು ಏಕಾಏಕಿ ನನ್ನ ವಿರುದ್ಧ ಏಕೆ ತಿರುಗಿ ಬಿದ್ದಿದ್ದೀರಿʼʼ ಎಂದು ಪ್ರಶ್ನಿಸಿದರು

ವಯಸ್ಸು,ಆರೋಗ್ಯದಿಂದ ಏನೇನು ಮಾತನಾಡುತ್ತಿದ್ದೀರಾ. ಆದರೆ, ನೀವು ನಮ್ಮ ಬಗ್ಗೆ ಮಾತನಾಡಬೇಡಿ. ಮಾತನಾಡುವುದು ನಮಗೂ ಗೊತ್ತಿದೆ.ನಾನು ರಾಜಕೀಯಕ್ಕೆ ಹೊಸಬನಲ್ಲ. ಅನುಭವ ಹೊಂದಿರುವವನು. ನಿಮ್ಮ ಮೇಲಿನ ಸ್ನೇಹ, ಗೆಳೆತನ ಬಿಟ್ಟು ಮಾತನಾಡಲು ಅವಕಾಶ ಕೊಡಬೇಡಿ ಎಂದು ಅವರು ಶ್ರೀನಿವಾಸ ಪ್ರಸಾದ್‌ ಅವರಿಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ಗೆ ಹೋಗುತ್ತೇನೆಂದು ಹೇಳಿಲ್ಲ…

ನಾನು ಕಾಂಗ್ರೆಸ್‌ಗೆ ಹೋಗುತ್ತೇನೆಂದು ಹೇಳಿಲ್ಲ. ಸದ್ಯ ಬಿಜೆಪಿಯಲ್ಲಿದ್ದೇನೆ. ಏನಾದರೂ ಹೋಗುವುದಾದರೇ ತಿಳಿಸಿಯೇ ಹೋಗುತ್ತೇನೆ. ಕಾಂಗ್ರೆಸ್‌ಗೆ ಸೇರುವ ಕುರಿತ ಕಲ್ಪನೆ ಮಾತುಗಳು ಬೇಡ ಎಂದು ಅವರು ಹೇಳಿದರು. ಧರ್ಮ ಸಹಿಷ್ಣುತೆಯಂತೆ ರಾಜಕೀಯ ಸಹಿಷ್ಣುತೆ ಇರಬೇಕು. ಜಾ.ದಳದಿಂದ ಬಿಜೆಪಿಗೆ ಸೇರಿಸಿಕೊಂಡು ನಡು ನೀರಿನಲ್ಲಿ ಕೈಬಿಟ್ಟರು. ರಾಜಕಾರಣ ಎಂದ ಮೇಲೆ ನಂಬಿಕೆ, ಮೋಸ, ತಂತ್ರ -ಕುತಂತ್ರ ಸಹಜ. ಉತ್ತರ ಕುಮಾರನ ಪೌರುಷದಂತೆ ಹೆದರಿ ಓಡಿ ಹೋಗಲ್ಲ. ಎಲ್ಲವನ್ನು ಎದುರಿಸುತ್ತೇನೆ. ಮಹಾಭಾರತದ ಕಾಲದಿಂದಲೂ ಇರುವಂತೆ ರಾಜಕಾರಣದಲ್ಲಿ ಇದೆಲ್ಲವೂ ಸಹಜವಾಗಿದೆ ಎಂದು ತಿಳಿಸಿದರು.

ಮುಂದೆ ಚುನಾವಣೆಗೆ ನಿಲ್ಲುವ ಚಿಂತನೆ ಇಲ್ಲ. ಡಿ.ದೇವರಾಜ ಅರಸು ಕಾಲದಿಂದ ರಾಜಕಾರಣ ಮಾಡಿಕೊಂಡು ಬಂದವರಿಗೆ ಚುನಾವಣೆ ಎದುರಿಸುವ ಶಕ್ತಿಇಲ್ಲ. ಟಿಕೆಟ್ ಪಡೆಯಲು ದುಡ್ಡು ಕೊಡಬೇಕಾದ ಸ್ಥಿತಿಯಿದೆ. ಚುನಾವಣೆ ಖರ್ಚಿಗೆ ಹಣ ಎಲ್ಲಿಂದ ತರೋದು. ಕಾಂಗ್ರೆಸ್ ಸೇರುವ ಬಗ್ಗೆ ಯಾವ ಮಾತುಕತೆ ನಡೆದಿಲ್ಲ. ಅಂತಹ ಪ್ರಮೇಯ ಬಂದಿಲ್ಲ. ಏನಾದರೂ ಸೇರಿದರೆ ಮಾಧ್ಯಮಕ್ಕೆ ಹೇಳುತ್ತೇನೆ ಎಂದು ವಿಶ್ವನಾಥ್‌ ಸ್ಪಷ್ಟಪಡಿಸಿದರು.

ಕಾಂಗ್ರೆಸ್, ಎಚ್.ಡಿ.ದೇವೇಗೌಡರ ಬಗ್ಗೆ ಕೃತಜ್ಞತಾ ಭಾವವಿದೆ. ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು ಚೆನ್ನಾಗಿರುತ್ತವೆ ಹೊರತು ಮುನ್ನಡೆಸುವ ನಾವಿಕನ ನಡವಳಿಕೆ ಸರಿಯಿರಲ್ಲ. ಕಾಂಗ್ರೆಸ್ ನನಗೆ ತಾಯಿ ಸಮಾನವೆಂದಿದ್ದನ್ನು ಈಗಲೂ ಹೇಳುತ್ತೇನೆ. ನನ್ನ ಝಂಡಾ ಬದಲಾದರೂ ಅಜೆಂಡಾ ಬದಲಾಗಲ್ಲ. ಕಾಂಗ್ರೆಸ್ ನನ್ನ ತಾಯಿ, ಜಾ.ದಳದಿಂದ ಜಾತ್ಯತೀತ ಮನೋಭಾವ ತುಂಬಿದೆ ಎಂದರು.

ಮನೆಯ ಹೊರಗೆ ನಿಂತು ನೋಡಿದಾಗ ಚೆನ್ನಾಗಿ ಕಾಣುತ್ತದೆ. ಅದರೊಳಗೆ ಹೋದಾಗ ಏನೇನು ಇರುತ್ತದೆ ಎಂಬುದು ಗೊತ್ತಾಗುತ್ತದೆ.ಅದೇ ರೀತಿ ಹೋಟೆಲ್ ಹೊರಗಿನದ್ದನ್ನು ನೋಡಿ ಒಳಗೆ ಹೋದಾಗ ಹಳಸಲು ದೋಸೆ ತಿನ್ನಲು ಕೊಟ್ಟಿದ್ದಂತೆ ನಮ್ಮ ಪರಿಸ್ಥಿತಿಯಾಗಿದೆ ಎಂದು ಮಾರ್ಮಿಕವಾಗಿ ಬೇಸರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!