ಮದ್ದೂರು: ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ನಾಲ್ವರು ವ್ಯಕ್ತಿಗಳು ಗ್ರಾಪಂ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಬೂದಗುಪ್ಪೆ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ತಾಲ್ಲೂಕಿನ ಆಲೂರು ಗ್ರಾಪಂ ಸದಸ್ಯ, ಬೂದಗುಪ್ಪೆ ಗ್ರಾಮದ ಲೇ.ಚನ್ನದೇವಯ್ಯ ಅವರ ಪುತ್ರ ಬಿ.ಸಿ.ಚಲುವರಾಜು ಹಲ್ಲೆಗೊಳಗಾದ ಗ್ರಾ.ಪಂ. ಸದಸ್ಯರಾಗಿದ್ದಾರೆ.
ಬೂದಗುಪ್ಪೆ ಗ್ರಾಮದವರಾದ ವಿಜಯೇಂದ್ರ, ಟಿಪ್ಪರ್ ಮಹದೇವ, ನಂದೀಶ ಹಾಗೂ ಮಹದೇವು ಎಂಬುವರು ಹಲ್ಲೆ ಮಾಡಿರುವ ವ್ಯಕ್ತಿಗಳಾಗಿದ್ದಾರೆ.
ಗ್ರಾಮದ ಬಸವೇಶ್ವರ ದೇವಾಲಯದ ಮುಂಭಾಗ ವಿಜಯೇಂದ್ರ ಎಂಬುವರು ಡಸ್ಟ್ ಸುರಿದಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಹಳೇ ದ್ವೇಷ ಸಾಧಿಸುತ್ತಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿoದ ಬಂದ ನಾಲ್ವರು ತಮ್ಮ ಮೇಲೆ ಮರದ ರಿಪಿಸ್‌ಪಟ್ಟಿಯಿಂದ ತಲೆ ಮೇಲೆ ಹೊಡೆದು ತನ್ನ ಹತ್ಯೆಗೆ ಸಂಚು ಮಾಡುವ ಉದ್ದೇಶದಿಂದ ತೀವ್ರವಾಗಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ತಮ್ಮನ್ನು ಸ್ಥಳೀಯ ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ಕೊಡಿಸಿದ್ದು, ತಮ್ಮ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




