Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ನೋಟೀಸ್ ಇಲ್ಲದೆ ಒಡನಾಡಿಗೆ ನುಗ್ಗಿದ ಪೊಲೀಸರ ತಪ್ಪೊಪ್ಪಿಗೆ

ಮುರುಘಾಶ್ರೀ ಪ್ರಕರಣ: ಪೊಲೀಸರ ಕ್ರಮಕ್ಕೆ ಆಕ್ಷೇಪ, ತನಿಖಾಧಿಕಾರಿಗಳಿಗೆ ದೂರು

ಮೈಸೂರು: ನಗರದ ಹೂಟಗಳ್ಳಿಯಲ್ಲಿ ಇರುವ ಒಡನಾಡಿ ಸೇವಾ ಸಂಸ್ಥೆಗೆ ಬುಧವಾರ ಮಫ್ತಿಯಲ್ಲಿ ನುಗ್ಗಿರುವ ಚಿತ್ರದುರ್ಗದ ೧೦ ಮಂದಿ ಪೊಲೀಸರು ಸಂಸ್ಥೆಯೊಳಗೆ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಮತ್ತು ಪರುಶು ಅವರು ಮಫ್ತಿಯಲ್ಲಿದ್ದವರನ್ನು ತಡೆದು, ಕಾನೂನು ಬದ್ದವಾಗಿ ಶೋಧ ನಡೆಸಿ, ಯಾವುದೇ ನೋಟೀಸ್ ಇಲ್ಲದೇ ಹೀಗೆ ಏಕಾಏಕಿ ಒಂದು ಸಂಸ್ಥೆಗೆ ನುಗ್ಗಿ ಹುಡುಕಾಟ ನಡೆಸುವುದು ಸರಿಯಲ್ಲ. ನೀವು ಇಲ್ಲಿಗೆ ಬರಬೇಕಾದರೆ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳೊಂದಿಗೆ ಬರಬೇಕು. ನಿಮಗೆ ಕಾನೂನಿನ ಅರಿವಿಲ್ಲವೇ? ಎಂದು ಕೇಳಿದ್ದಾರೆ.
ಇದಕ್ಕೆ ಸರಿಯಾಗಿ ಉತ್ತರ ನೀಡದ ಪೊಲೀಸರು, ನಾವು ಮಕ್ಕಳ ಕಲ್ಯಾಣ ಸಮಿತಿ ಎಂದು ಭಾವಿಸಿ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ನೀವು ಇಲ್ಲಿಗೆ ಬಂದಿರುವುದು ಎರಡನೇ ಬಾರಿ, ಹೀಗಿರುವಾಗ ಹೇಗೆ ಮಕ್ಕಳ ಕಲ್ಯಾಣ ಸಮಿತಿ ಎಂದು ತಿಳಿದುಕೊಂಡಿರಿ ಎಂದು ಸ್ಟ್ಯಾನ್ಲಿಯವರು ಕೇಳಿದ್ದಾರೆ. ಇದಕ್ಕೆ ಸರಿಯಾಗಿ ಉತ್ತರ ನೀಡದ ಪೊಲೀಸರು, ಯಾರೊಂದಿಗೊ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೊರ ಹೋಗಲು ಯತ್ನಿಸಿದಾಗ ಅವರನ್ನು ತಡೆದಿರುವ ಸಂಸ್ಥೆಯ ನಿರ್ದೇಶಕರು, ಸಮಂಜಸವಾದ ಉತ್ತರ ನೀಡುವವರೆಗೂ ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ. ಮಕ್ಕಳ ತಾಯಿಯನ್ನು ವಿಚಾರಣೆ ಮಾಡಿ ಕರೆತಂದು ಬಿಡಲಾಗುವುದು ಎಂದು ಕರೆದುಕೊಂಡು ಹೋದಿರಿ. ಮತ್ತೆ ಅವರನ್ನು ಇಲ್ಲಿಗೆ ಕರೆ ತಂದು ಬಿಟ್ಟಿಲ್ಲ. ನೀವು ಯಾರ ಪರವಾಗಿ ಹೀಗೆ ಕೆಲಸ ಮಾಡುತ್ತಿದ್ದೀರಾ ಎಂದು ವಾದಿಸಿದ್ದಾರೆ. ಇದಕ್ಕೆ ಪೊಲೀಸರು ಸರಿಯಾಗಿ ಉತ್ತರ ನೀಡದೆ ತಪ್ಪಾಯಿತು ಎಂದು ಹೇಳಿ ಹೋಗಿದ್ದಾರೆ ಎನ್ನಲಾಗಿದೆ.

ಹೊರಗೆ ಜೀಪ್ ನಿಲ್ಲಿಸಿ ಮಫ್ತಿಯಲ್ಲಿ ಒಳಗೆ ಬಂದ ಪೊಲೀಸರು ಹುಟುಕಾಟ ನಡೆಸಿ, ವಿಚಿತ್ರವಾಗಿ ವರ್ತಿಸಿದರಲ್ಲದೆ, ಹೊರಗೆ ಹೋಗಿ ಮತ್ತ್ಯಾರ ಜತೆಯಲ್ಲೋ ದೂರವಾಣಿಯಲ್ಲಿ ಮಾತನಾಡುವುದು, ಹೀಗೆ ಮಾಡಿ ಕಾನೂನು ಪ್ರಕಾರ ಮಕ್ಕಳ ಸುರಕ್ಷತೆ ಇರುವ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.ಈ ಪೈಕಿ ಒಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಯು ಇದ್ದರು ಎನ್ನಲಾಗಿದೆ.
ಈ ಸಂಬಂಧ ಆಂದೋಲನ ದಿನಪತ್ರಿಕೆಯ ಜೊತೆಗೆ ನಾಡಿರುವ ಸಂಸ್ಥೆಯ  ನಿರ್ದೇಶಕರಾದ ಸ್ಟ್ಯಾನ್ಲಿ, ಮೊನ್ನೆಯಷ್ಟೇ ಕಾನೂನು ಪ್ರಕಾರ ಅಧಿಕಾರಿಗಳು ಸಂಸ್ಥೆಗೆ ಬಂದು ತನಿಖೆ ನಡೆಸಿ ಹೋಗಿದ್ದಾರೆ. ಮುರುಘಾಶ್ರೀ ಪ್ರಕರಣ ಸಂಬಂಧ ವಿಚಾರಣೆ ಇತ್ತು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಸಂಸ್ಥೆಯಲ್ಲಿ ನಾವುಗಳು ಯಾರು ಇರುವುದಿಲ್ಲ ಾ ಮಕ್ಕಳನ್ನು ಸುಲಭವಾಗಿ ಕರೆದುಕೊಂಡು ಹೋಗಬಹುದು ಎಂದು ದಿಢೀರ್ ಆಗಮಿಸಿದ್ದಾರೆ. ಆದರೆ, ನಾವು ಸಂಸ್ಥೆಯಲ್ಲಿಯೇ ಇದ್ದೆವು. ಈ ಸಂಬಂಧ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕದ ಮೂಲಕ ಪ್ರಕರಣದ ತನಿಖಾ ಅಧಿಕಾರಿಗಳಿಗೆ ದೂರು ನೀಡಿ, ಕಾನೂನು ಬದ್ಧವಾಗಿ ವಿಚಾರಣೆ ನಡೆಸುವಂತೆ ತಿಳಿಸಲಾಗುವುದು ಎಂದು ಹೇಳಿದರು.


ಮೊನ್ನೆಯಷ್ಟೇ ಅಧಿಕಾರಿಗಳು ಬಂದು ಕಾನೂನು ಪ್ರಕಾರ ತನಿಖೆ ನಡೆಸಿ, ಮಾಹಿತಿ ಪಡೆದು ಹೋಗಿದ್ದಾರೆ. ಪೊಲೀಸರು ಹೀಗೆ ಮಕ್ಕಳ ಕಾನೂನು ಸುರಕ್ಷಿತ ಪ್ರದೇಶಕ್ಕೆ ಈ ರೀತಿ ನೋಟೀಸ್ ಇಲ್ಲದೆ ನುಗ್ಗಿರುವುದು ಸರಿಯಲ್ಲ. ಅವರು ನಮ್ಮ ಪ್ರಶ್ನೆಗೆ ಸಮಂಜಸ ಉತ್ತರ ನೀಡದೆ ತಪ್ಪೊಪ್ಪಿಕೊಂಡಿರುವುದರಿಂದ ಇಡೀ ಘಟನೆ ಸಂಬಂಧ ಪ್ರಕರಣ ತನಿಖಾಧಿಕಾರಿಗಳಿಗೆ ದೂರು ನೀಡಲಾಗುವುದು.

-ಸ್ಟ್ಯಾನ್ಲಿ ,ಒಡನಾಡಿ ಸಂಸ್ಥೆ ನಿರ್ದೇಶಕರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!