Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ರೈತರ ಸಮಸ್ಯೆ ಕೇಳುವವರಾರೂ ಇಲ್ಲ

ರೈತ ಸಂಘದ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ನೀಡಿ ಪೃಥ್ವಿರೆಡ್ಡಿ

ಮಂಡ್ಯ: ರೈತರ ಸಮಸ್ಯೆಗಳನ್ನು ಯಾರೂ ಕೇಳುತ್ತಿಲ್ಲ, ಮಾಜಿ ಶಾಸಕ ದಿ. ಕೆ.ಎಸ್.ಪುಟ್ಟಣ್ಣಯ್ಯ ಅವರು ಸದನದಲ್ಲಿ ದನಿ ಎತ್ತುತ್ತಿದ್ದರು. ಈಗ ಯಾರೂ ಇಲ್ಲ, ನಿಮ್ಮ ಸಮಸ್ಯೆಗಳನ್ನು ಯಾರು ಚರ್ಚೆ ಮಾಡುತ್ತಾರೆ ಎಂಬುದು ಮುಖ್ಯವಾಗಬೇಕು. ಈಗ ನಡೆಯುತ್ತಿರುವ ಚರ್ಚೆಯು ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶವಾಗಿದೆ ಎಂದು ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಆರೋಪಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸುವ ಮೂಲಕ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ. ಇಲ್ಲಿ ಏಕೆ ನೀಡಲಾಗುತ್ತಿಲ್ಲ, ಪಂಜಾಬ್‌ನಲ್ಲಿ ಇಳುವರಿ ಶೇ.೭ ರಿಂದ ೮ ರಷ್ಟು ಇದೆ. ಕರ್ನಾಟಕದಲ್ಲಿ ಶೇ.೧೧ ರಿಂದ ೧೨ ರಷ್ಟು ಇದೆ. ಆದರೂ ತಾರತಮ್ಯ ಮಾಡುತ್ತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಇಲ್ಲಿಗೆ ಬಂದಿರುವುದು ಮತ ಹಾಕಿಸಿಕೊಡುವ ದೃಷ್ಟಿಯಿಂದಲ್ಲ. ದೇಶದಲ್ಲಿಯೇ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿ ಎನ್ನುವುದಷ್ಟೇ ನಮ್ಮ ಉದ್ದೇಶವಾಗಿದೆ. ಅಂತಹ ಕಾನೂನುಗಳು ಬರಬೇಕು. ಸಂಸತ್‌ನಲ್ಲಿ ಚರ್ಚೆಯಾಗುತ್ತಿದೆ ಎನ್ನುವ ನಿಟ್ಟಿನಲ್ಲಿ ಸಂಸತ್‌ನಲ್ಲಿ ಒಪ್ಪಿಕೊಂಡಿದ್ದರೆ ಅರ್ಧದಷ್ಟು ಜನ ಜೈಲಿಗೆ ಹೋಗುತ್ತಿದ್ದರು. ಕಾನೂನನ್ನು ದಿಟ್ಟವಾಗಿ ತರುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ರೈಲ್ವೆ ಹಾಗೂ ವಿಮಾನ ನಿಲ್ದಾಣಕ್ಕೆ ಜಾಗಗಳನ್ನು ಮಾರಿಕೊಳ್ಳುತ್ತಿದ್ದಾರೆ. ಗುಜರಾತ್‌ನಲ್ಲಿಯೂ ಇದೇ ಕಥೆ ಆಗಿದೆ. ವಿಮಾನ ಕೊಳ್ಳಬೇಕು ಎಂದರೆ ಅಲ್ಲಿ ಶೇ.೧೪ ಪಟ್ಟು ಜಾಸ್ತಿ ಮಾಡಿದ್ದಾರೆ. ಈ ಹಣವನ್ನು ಜನಸಾಮಾನ್ಯರಿಂದಲೇ ವಸೂಲಿ ಮಾಡಲಾಗುತ್ತಿದೆ. ಜನರಲ್ಲಿ ಮನವಿ ಏನೆಂದರೆ, ನಿಮ್ಮ ಪರವಾಗಿಯೇ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮೊದಲು ರೈತರು ಒಗ್ಗಟ್ಟಾಗಬೇಕು. ಈ ಹಿಂದೆ ರೈತ ಸಂಘಕ್ಕೆ ರಾಜಕೀಯ ಪಕ್ಷಗಳು ಭಯಪಡುತ್ತಿದ್ದವು, ಈಗ ಯಾವ ಭಯವೂ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ಪಂಜಾಬ್‌ನಲ್ಲಿ ಮುಖ್ಯಮಂತ್ರಿಯನ್ನೇ ಸೋಲಿಸಿದ ಹುಡುಗ ಕೇವಲ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ. ರೈತರನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವುದು ಮುಖ್ಯವಾಗಬೇಕು. ಮುಂಬರುವ ಚುನಾವಣೆಯಲ್ಲಿ ರೈತರು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಮ್ಮ ಆಮ್ ಆದ್ಮಿ ಪಕ್ಷ ಬೆಂಬಲ ನೀಡುತ್ತದೆ. ನಾವು ಒಳ್ಳೆಯ ಉದ್ದೇಶದಿಂದಲೇ ಸಲಹೆಯನ್ನು ನೀಡುತ್ತಿದ್ದೇವೆ, ಇದು ಕಾರ್ಯರೂಪಕ್ಕ ಬರಬೇಕು ಎಂದು ಸಲಹೆ ನೀಡಿದರು.

ಎಎಪಿ ಮುಖಂಡ ರವಿಕಿರಣ್ ಮಾತನಾಡಿ, ಇಂಜಿನಿಯರ್ ಮಾಡಿದ್ದರೂ ಕೂಡ ೨೫ ಲಕ್ಷ ಹಣ ಕೊಟ್ಟು ಮನ್‌ಮುಲ್‌ನಲ್ಲಿ ಕೆಲಸ ಪಡೆದುಕೊಳ್ಳುತ್ತಾರೆ. ಇಲ್ಲಿ ರೈತರ ಮಕ್ಕಳಿಗೆ ಕೆಲಸ ನೀಡಿದರೆ ಮಾತ್ರ ಅವರಿಗೆ ಹಾಲು ಉತ್ಪಾದನೆಯಿಂದ ಹಿಡಿದು ರೈತರ ಹೈನುಗಾರಿಕೆಯವರೆಗೂ ವಿಷಯ ತಿಳಿದಿರುತ್ತದೆ.

ಮನ್‌ಮುಲ್‌ನಲ್ಲಿ ರೈತರ ಮಕ್ಕಳಿಗೆ ಉದ್ಯೋಗಾವಕಾಶಗಳು ಹೆಚ್ಚಾದರೆ ಮನ್‌ಮುಲ್ ಉಳಿಯುತ್ತದೆ. ಈ ಭ್ರಷ್ಟಾಚಾರ ಹಾಗೂ ಹಗರಣಗಳು ಆಗ ಮಾತ್ರ ನಿಲ್ಲುತ್ತವೆ ಎಂದು ಹೇಳಿದರು.

ಎಎಪಿ ಜಿಲ್ಲಾ ಉಸ್ತುವಾರಿ ಬೂದನೂರು ಬೊಮ್ಮಯ್ಯ ಮಾತನಾಡಿ, ಮೈಶುಗರ್ ಸಕ್ಕರೆ ಕಾರ್ಖಾನೆ ಉಳಿವಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಈಗ ಆರಂಭವಾಗಿರುವ ಕಾರ್ಖಾನೆಯು ಕಬ್ಬಿಗೆ ೧,೫೦೦ ರೂ. ನಷ್ಟವಾಗುತ್ತಿದೆ ಎಂಬ ಆರೋಪವಿದೆ. ಇದನ್ನು ಸರ್ಕಾರ ನಡೆಸಲು ಆಗುವುದಿಲ್ಲ ಎಂದು ಅಲ್ಲೊಬ್ಬ ಸಚಿವ ಹೇಳುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಎಪಿ ಜಂಟಿ ಕಾರ್ಯದರ್ಶಿ ದರ್ಶನ್‌ಜೈನ್, ಅಬ್ದುಲ್, ಮಹದೇವಸ್ವಾಮಿ, ಶಿವಕುಮಾರ್, ಆಕಾಶ್, ಶಿವರಾಮು, ಗಂಗಾಧರಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪುಗೌಡ, ಮುಖಂಡರಾದ ಎಸ್.ಸಿ.ಮಧುಚಂದನ್, ತಗ್ಗಹಳ್ಳಿ ವೆಂಕಟೇಶ್, ನಾಗೇಶ್, ರವಿಕುಮಾರ್, ಶಿವಳ್ಳಿ ಚಂದ್ರು, ಪುಟ್ಟಸ್ವಾಮಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!