Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸುದ್ದಿ ವಾಹಿನಿ ನಿರೂಪಕಿ ಕೆಲಸ ಕೊಡಿಸುವುದಾಗಿ ನರ್ಸ್‌ಗೆ ವಂಚನೆ, ಹಲ್ಲೆ!

ಗೋಣಿಕೊಪ್ಪಲು: ಪತ್ರಕರ್ತನ ಸೋಗಿನಲ್ಲಿ ನಡುರಾತ್ರಿ ೧೨ ಗಂಟೆಯ ವೇಳೆ ಸರ್ಕಾರಿ ಆಸ್ಪತ್ರೆಗೆ ತೆರಳುವ ಮೂಲಕ ಅಲ್ಲಿರುವ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಮೇಲೆ ತನ್ನ ಪೌರುಷ ತೋರಿಸಿದಲ್ಲದೆ, ಆವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಡಿ.ನಾಗೇಶ್‌ನ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೊಂದ ಮಹಿಳೆ ಧೈರ್ಯದಿಂದ ಪೊಲೀಸ್ ಠಾಣೆಗೆ ತೆರಳಿ ಘಟನೆಗೆ ಸಂಬಂಧಿಸಿದಂತೆ ಲಿಖಿತ ದೂರನ್ನು ಪೊಲೀಸರಿಗೆ ನೀಡಿದ ಹಿನ್ನಲೆಯಲ್ಲಿ ಗೋಣಿಕೊಪ್ಪ ಠಾಣೆಯ ಠಾಣಾಧಿಕಾರಿ ರೂಪಾದೇವಿ ಬೀರಾದಾರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಪತ್ರಕರ್ತನ ಸೋಗಿನಲ್ಲಿ ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಗೆ ನಡು ರಾತ್ರಿಯ ವೇಳೆ ತೆರಳಿ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿಯು ಇರುವ ಕೊಠಡಿಯ ಬಾಗಿಲನ್ನು ಬಲವಂತವಾಗಿ ಬಡಿದು, ಕಾಲಿನಿಂದ ಒದ್ದು ಬಾಗಿಲನ್ನು ತೆರೆಸಿದ್ದ.

ನಂತರ ಆವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಹಲವರ ಮೇಲೆ ಹಲ್ಲೆಗೆ ಮುಂದಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಿಲ್ಲಾಧಿಕಾರಿ ಡಾ. ಸತೀಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು.

ಮೇಲಾಧಿಕಾರಿಗಳ ಸೂಚನೆ ಮೇರೆಗೆ ಘಟನೆಗೆ ಸಂಬಂಧಿಸಿದಂತೆ ವಿವರ ನೀಡಿದ್ದಾರೆ. ಅಲ್ಲದೆ ಅನ್ಯಾಯಕ್ಕೆ ಒಳಗಾದ ಮಹಿಳೆಯ ರಕ್ಷಣೆಗೆ ನಿಲ್ಲುವುದರೊಂದಿಗೆ ಪೊಲೀಸ್ ದೂರು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ನಾಗೇಶ್ ಪರಾರಿಯಾಗಿದ್ದಾರೆ.

ಪೊಲೀಸರ ಆರಂಭಿಕ ಮಾಹಿತಿ ಪ್ರಕಾರ ಆರೋಪಿ ನಾಗೇಶ್ ೮ ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ. ಪೊಲೀಸರು ಈತನ ಬಂಧನಕ್ಕಾಗಿ ಕ್ರಮ ಕೈಗೊಂಡಿದ್ದಾರೆ.

ನೊಂದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಮೂರು ತಿಂಗಳ ಹಿಂದೆ ನಾಗೇಶ್‌ನ ಚಾನಲ್‌ಗೆ ವಾರ್ತೆ ಓದುವ ಬಗ್ಗೆ ಕೇಳಿಕೊಂಡಿದ್ದು, ಮಾಸಿಕ ೧೦ ಸಾವಿರ ನೀಡುವುದಾಗಿ ಹೇಳಿದ್ದರು.

ನಂತರ ನಾಗೇಶ್ ತನಗೆ ಕಷ್ಟ ಇರುವುದಾಗಿ ಹೇಳಿ ನನ್ನ ಬಳಿ ಇದ್ದ ಲಕ್ಷಾಂತರ ಬೆಲೆಬಾಳುವ ಒಡವೆಗಳನ್ನು ಪಡೆದುಕೊಂಡಿದ್ದ. ಇಲ್ಲಿಯ ತನಕ ಪಡೆದುಕೊಂಡ ಚಿನ್ನಾಭರಣಗಳನ್ನು ವಾಪಾಸು ನೀಡಿರುವುದಿಲ್ಲ.

ಈ ಬಗ್ಗೆ ಆತನನ್ನು ವಿಚಾರಿಸಿದಾಗ ಕೊಲೆ ಮಾಡುವ ಬೆದರಿಕೆ ಒಡ್ಡಿರುತ್ತಾನೆ. ಅಲ್ಲದೆ ನನ್ನನ್ನು ಎಲ್ಲಾ ಕಡೆಯು ಹಿಂಬಾಲಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾನೆ.

ದಿನಾಂಕ ೬.೧.೨೦೨೪ರಂದು ರಾತ್ರಿ ೧೨ ಗಂಟೆಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಹಣಕಾಸಿನ ವ್ಯವಹಾರದ ಬಗ್ಗೆ ಜಗಳ ತೆಗೆದು ನನ್ನನ್ನು ಎಳೆದಾಡಿ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ.

ಕೂಡಲೇ ನನ್ನ ಗಂಡನಿಗೆ ಈ ವಿಷಯ ತಿಳಿಸಿರುತ್ತೇನೆ. ನನ್ನ ಗಂಡ ಆಸ್ಪತ್ರೆಗೆ ಬಂದು ಕೇಳಿದಾಗ ಆತ ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆಬೆದರಿಕೆ ಒಡ್ಡಿರುತ್ತಾನೆ ಎಂದು ದೂರಿನಲ್ಲಿ ನೊಂದ ಮಹಿಳೆ ವಿವರಿಸಿದ್ದಾಳೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ