Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಂದಿತು ಹೋರಾಟದ ಪ್ರಖರ ದನಿ

ಮೈಸೂರು: ನಾಡಿನ ಹಿರಿಯ ಹೋರಾಟಗಾರ, ನಾಡು, ನುಡಿ, ಸಾಮಾಜಿಕ ಚಳವಳಿಗಳಲ್ಲಿ ಸದಾ ಸಕ್ರಿಯವಾಗಿರುತ್ತಿದ್ದ ಪ.ಮಲ್ಲೇಶ್ (88) ಗುರುವಾರ ನಿಧನರಾದರು.

ತಾವೇ ಸ್ಥಾಪಿಸಿದ್ದ ನೃಪತುಂಗ ಕನ್ನಡ ಶಾಲೆಯಲ್ಲಿ ಗುರುವಾರ ಮಧ್ಯಾಹ್ನದವರೆಗೂ ಇದ್ದ ಪ.ಮಲ್ಲೇಶ್ ಅವರು ಶನಿವಾರದ ಶಾಲೆಯ ಕಾರ್ಯಕ್ರಮದ ತಯಾರಿಯಲ್ಲಿದ್ದರು. ಏಕಾಏಕಿ ಕುಸಿದುಬಿದ್ದ ಅವರನ್ನು ಕೂಡಲೇ ಬಿಜಿಎಸ್ ಅಪೋಲೋ ಆಸ್ಪತ್ರೆ ದಾಖಲಿಸಿದರೂ ಸಂಜೆ 4ರ ಹೊತ್ತಿಗೆ ಕೊನೆಯುಸಿರೆಳೆದರು.

ಅವರಿಗೆ ಪುತ್ರ ಶಿವರಾಜು, ಪುತ್ರಿಯರಾದ ಅನುರಾಧ, ಸವಿತಾ ಹಾಗೂ ಮಯೂರ ಇದ್ದಾರೆ. ಮಲ್ಲೇಶ್ ಅವರ ಪತ್ನಿ ಸರ್ವಮಂಗಳ ಎರಡು ವರ್ಷಗಳ ಹಿಂದೆಯಷ್ಟೇ ನಿಧನರಾಗಿದ್ದರು.

ಪ್ರಗತಿಪರ ಚಿಂತಕ, ಸಮಾಜವಾದಿ ನಾಯಕ, ಕನ್ನಡಪರ ಹೋರಾಟಗಾರ, ರೈತ, ದಲಿತ ಚಳವಳಿಯ ಮುಂಚೂಣಿಯಲ್ಲಿದ್ದ ಪ.ಮಲ್ಲೇಶ್ ಅವರ ನಿಧನದಿಂದ ಮೈಸೂರು ಭಾಗದ ಹೋರಾಟದ ಮತ್ತೊಂದು ಕಿಚ್ಚು ನಂದಿ ಹೋಗಿದೆ.
ಹೋರಾಟ, ಚಳವಳಿಯನ್ನೇ ಉಸಿರಾಗಿಸಿಕೊಂಡಿದ್ದ ಗಾಂಧಿವಾದಿ, ಸಮಾಜಮುಖಿ ಚಿಂತನೆಯ ಪ್ರಖರ ವಾಗ್ಮಿ ಪ.ಮಲ್ಲೇಶ್ ಎಂದಿಗೂ ತಾವು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ರಾಜಿಯಾಗಿರಲಿಲ್ಲ. ಆಚಾರ್ಯ ವಿನೋಬಾ ಬಾವೆ, ಜಯಪ್ರಕಾಶ್ ನಾರಾಯಣ್ (ಜೆಪಿ) ಅವರ ಚಳವಳಿಗಳಿಂದ ಪ್ರೇರೇಪಿತರಾಗಿ ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡು ಜೀವನದುದ್ದಕ್ಕೂ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿದ್ದರು.
ಸಮಾಜವಾದಿ ನಾಯಕ ರಾಮ್‌ಮನೋಹರ್ ಲೋಹಿಯಾ ಅವರ ಅನುಯಾಯಿಯಾಗಿದ್ದ ಮಲ್ಲೇಶ್ ಶಾಂತವೇರಿ ಗೋಪಾಲಗೌಡರ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು. ರೈತ ಚಳವಳಿಯ ಅದ್ವರ್ಯ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪ್ರಗತಿಪರ ಚಿಂತಕ, ಲೇಖಕ ಪಿ.ಲಂಕೇಶ್, ವಿಚಾರವಾದಿ ಪ್ರೊ.ಕೆ.ರಾಮದಾಸ್, ಲೇಖಕ ಪೂರ್ಣಚಂದ್ರ ತೇಜಸ್ವಿ, ಬಿ.ಎನ್.ಶ್ರೀರಾಮ್, ಡಾ.ಹಿ.ಶಿ.ರಾಮಚಂದ್ರೇಗೌಡ, ಕೆ.ನ.ಶಿವತೀರ್ಥನ್ ಮುಂತಾದವರೊಂದಿಗೆ ಒಡನಾಟ ಹೊಂದಿದ್ದ ಪ.ಮಲ್ಲೇಶ್ ಗೋಕಾಕ್ ಚಳವಳಿಯಲ್ಲಿ ಮೈಸೂರು ಭಾಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು.
ಕನ್ನಡ ಕ್ರಿಯಾ ಸಮಿತಿ ಸ್ಥಾಪಿಸಿ, ಕನ್ನಡಪರ ಹೋರಾಟಗಳಲ್ಲಿ ಪ್ರಮುಖವಾಗಿ ಭಾಗವಹಿಸುತ್ತಿದ್ದ ಅವರು, ಹಲವು ಹೋರಾಟಗಳನ್ನು ಮುನ್ನಡೆಸುವ ಜತೆಗೆ ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಶಿಕ್ಷಣ ದೊರೆುಂಬೇಕೆಂಬ ಒತ್ತಾಯಕ್ಕೆ ಧ್ವನಿಯಾಗಿದ್ದರಲ್ಲದೆ ಇದನ್ನು ಕಾರ್ಯಗತಗೊಳಿಸಿದ್ದರು. ಕನ್ನಡ ವಿಕಾಸ ಶೈಕ್ಷಣಿಕ, ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಅಡಿಯಲ್ಲಿ ನೃಪತುಂಗ ಕನ್ನಡ ಶಾಲೆಯನ್ನು ಸ್ಥಾಪಿಸಿ ಕನ್ನಡ ಮಾಧ್ಯಮದಲ್ಲೇ ಪ್ರೌಢ ಶಾಲೆವರೆಗೂ ಶಿಕ್ಷಣ ನೀಡುತ್ತಿದ್ದರು. ಕನ್ನಡ ಮಾಧ್ಯಮದಲ್ಲೇ ವಿಜ್ಞಾನ ಬೋಧನೆಗೂ ಒತ್ತು ನೀಡಿ ಪದವಿಪೂರ್ವ ಕಾಲೇಜನ್ನೂ ಆರಂಭಿಸಿದ್ದರು.
ಶತಮಾನಗಳಿಗೂ ಹಳೆಯದಾದ ಎನ್‌ಟಿಎಂ ಶಾಲೆಯನ್ನು ಮುಚ್ಚಿ, ಆ ಜಾಗವನ್ನು ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡುವ ತೀರ್ಮಾನವಾದಾಗ ಇದರ ವಿರುದ್ಧ ಹೋರಾಟ ರೂಪಿಸಿ ಬೃಹತ್ ಚಳವಳಿಯನ್ನೂ ಮಾಡಿದ್ದರು.
ಪ.ಮಲ್ಲೇಶ್ ನೇರ ನಡೆ ನುಡಿಯ ಹೋರಾಟಗಾರರಾಗಿದ್ದರು. ನಿಷ್ಟುರವಾದಿಯೂ ಆಗಿದ್ದರು. ಕೆಲವೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾದಾಗ ಪಲಾಯನ ಮಾಡದೆ, ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಬ್ರಾಹ್ಮಣ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ರೀತಿಯ ಟೀಕೆ ಎದುರಿಸಿದ್ದರು.
ಪ್ರಶಸ್ತಿ, ಸನ್ಮಾನ, ಸರ್ಕಾರದ ಸ್ಥಾನಮಾನಗಳಿಂದ ದೂರ ಇದ್ದ ಮಲ್ಲೇಶ್, ಅನೇಕ ರಾಜಕಾರಣಿಗಳ ಆಪ್ತವಲಯದಲ್ಲೂ ಗುರುತಿಸಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಅವರ ಆಪ್ತ ಸ್ನೇಹಿತರೂ ಆಗಿದ್ದರು.


ನೃಪತುಂಗ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪ.ಮಲ್ಲೇಶ್ ಅವರ ಪಾರ್ಥಿವ ಶರೀರವನ್ನು ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ೯.೦೦ ರಿಂದ ೧೦ ಗಂಟೆವರೆಗೆ ಇಡಲಾಗುತ್ತದೆ. ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ