Mysore
20
overcast clouds

Social Media

ಶುಕ್ರವಾರ, 02 ಜನವರಿ 2026
Light
Dark

ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಜಾ.ದಳದಲ್ಲಿ ಇಕ್ಕಟ್ಟು

ತಮಗೆ ನಾಲ್ಕು ಸ್ಥಾನಗಳನ್ನು ಜಾ.ದಳಕ್ಕೆ ಪಟ್ಟು
ಬಿಟ್ಟುಕೊಡಲು ಒಪ್ಪದ ಬಿಜೆಪಿ
ಆಡಳಿತ ಪಕ್ಷದ ನಾಯಕ ಸ್ಥಾನವು ಬಿಜೆಪಿ ಪಾಲು ಸಾಧ್ಯತೆ

ಕೆ.ಬಿ.ರಮೇಶನಾಯಕ

ಮೈಸೂರು: ಮಹಾಪೌರರ ಸ್ಥಾನ ಪಡೆಯುವ ವಿಚಾರದಲ್ಲಿ ನೇರ ಮೈತ್ರಿಗೆ ನಿರಾಸಕ್ತಿ ತೋರಿದ್ದ ಬಿಜೆಪಿ ಹಾಗೂ ಜಾ.ದಳ ಕೊನೆಯ ಕ್ಷಣದಲ್ಲಿ ಬದಲಾದ ಬೆಳವಣಿಗೆಯಲ್ಲಿ ಕೈ ಜೋಡಿಸಿದರೂ ಉಪ ಮಹಾಪೌರ ಸ್ಥಾನ ಕೈತಪ್ಪಿದ ಜಾ.ದಳ ಈಗ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದರೆ, ಬಿಜೆಪಿ ಸಮಬಲಕ್ಕೆ ಪಟ್ಟು ಹಿಡಿದಿದೆ.

ಪ್ರಮುಖ ಎರಡು ಸ್ಥಾನಗಳು ಸಿಗದೆ ರೋಸಿ ಹೋಗಿರುವ ಜಾ.ದಳಕ್ಕೆ ಅಧ್ಯಕ್ಷ ಸ್ಥಾನ ಸಿಗದಿದ್ದರೆ ವರಿಷ್ಠರ ವಿರುದ್ಧ ಸಿಡಿದೇಳುವ ಸಾಧ್ಯತೆ ಇದೆ. ಇತ್ತ ಸ್ಥಾಯಿ ಸಮಿತಿಗಳ ಹಂಚಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಜಾ.ದಳದ ನಡುವೆ ಕಗ್ಗಂಟಾಗುವ ಸಾಧ್ಯತೆ ಇದೆ. ಜಾ.ದಳದ ಬೇಡಿಕೆಗೆ ಬಗ್ಗಲ್ಲ ಎನ್ನುವ ಖಡಕ್ ಸಂದೇಶ ನೀಡಿರುವ ಬಿಜೆಪಿಯು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದಲ್ಲೂ ರಾಜೀ ಸೂತ್ರಕ್ಕೆ ಒಪ್ಪದಿದ್ದರೆ ಕೌನ್ಸಿಲ್ ಒಳಗೆ ಮಾತುಕೊಟ್ಟಿರುವ ನಾಯಕರೊಬ್ಬರು ನುಡಿದಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಜಾ.ದಳಕ್ಕೆ ಬಿಟ್ಟುಕೊಡುವಂತೆ ಪ್ರಮುಖರು ಪಟ್ಟು ಹಿಡಿದಿದ್ದಾರೆ. ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜಾ.ದಳಕ್ಕೆ ಬಿಟ್ಟುಕೊಡಲು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಒಪ್ಪಿದ್ದಾರೆಂದು ಶಾಸಕ ಜಿ.ಟಿ.ದೇವೇಗೌಡ ಬಹಿರಂಗವಾಗಿ ಹೇಳಿದ್ದರೆ, ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಕುತೂಹಲ ಮೂಡಿಸಿದೆ.

ಸಮಬಲಕ್ಕೆ ಬಿಜೆಪಿ ಪಟ್ಟು: ಮಹಾಪೌರ, ಉಪ ಮಹಾಪೌರ ಸ್ಥಾನವನ್ನು ಪಡೆದಿರುವ ಬಿಜೆಪಿ ಸ್ಥಾಯಿ ಸಮಿತಿಗಳಲ್ಲಿ ತಲಾ ಎರಡು ಸ್ಥಾನಗಳನ್ನು ಹಂಚಿಕೊಳ್ಳಲು ಬಯಸಿದ್ದು, ಜಾ.ದಳ ಪಟ್ಟಿಗೆ ಮಣಿಯದೆ ಇರುವ ಸಾಧ್ಯತೆ ಇದೆ. ಉಪ ಮಹಾಪೌರ ಸ್ಥಾನದ ಅಭ್ಯರ್ಥಿ ನಾಮಪತ್ರ ತಿರಸ್ಕಾರಕ್ಕೆ ಬಿಜೆಪಿ ಹೊಣೆಯಲ್ಲ ಎಂದಿರುವ ಬಿಜೆಪಿ ನಾಯಕರು ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡದಿರಲು ತೀರ್ಮಾನಿಸಿದ್ದಾರೆ. ಪಕ್ಷದ ಗಮನಕ್ಕೆ ಬಾರದೆ ನಾಲ್ಕು ಸ್ಥಾಯಿ ಸಮಿತಿಯನ್ನು ಬಿಟ್ಟುಕೊಡುವ ಬಗ್ಗೆ ಒಪ್ಪಿಕೊಂಡ ನಾಯಕರೊಬ್ಬರ ವಿರುದ್ಧವೇ ಪಕ್ಷದ ನಾಯಕರು ತಿರುಗಿ ಬಿದ್ದಿದ್ದಾರೆ. ಹೀಗಾಗಿ, ಜಾ.ದಳದ ಬೇಡಿಕೆ ಯಾವ ರೀತಿ ಈಡೇರಲಿದೆ ಎನ್ನುವುದು ಚುನಾವಣೆ ದಿನಾಂಕ ಪ್ರಕಟವಾದ ಮೇಲೆ ಗೊತ್ತಾಗಲಿದೆ.

ಆಕಾಂಕ್ಷಿಗಳ ಪೈಪೋಟಿ

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಸ್ಥಾನವು ಬಿಜೆಪಿಗೆ ದಕ್ಕಿದಲ್ಲಿ ಪ್ರಮೀಳಾ ಭರತ್ ಅಥವಾ ಬಿ.ವಿ.ರವೀಂದ್ರ ಅವರ ನಡುವೆ ಪೈಪೋಟಿ ಉಂಟಾಗುವ ಸಾಧ್ಯತೆ ಇದ್ದರೆ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಾಗಿ ವೇದಾವತಿ, ಎಂ.ಸತೀಶ್ ನಡುವೆ ಪೈಪೋಟಿ ಉಂಟಾದರೂ ಪಕ್ಷದ ನಾಯಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಸತೀಶ್ ಪರವಾಗಿ ಒಲವು ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಟ್ಟಣ ಯೋಜನೆ ಮತ್ತು ಸುಧಾರಣೆ ಸಮಿತಿಗೆ ಜಾ.ದಳದ ಕೆ.ವಿ.ಶ್ರೀಧರ್, ಮಹಮ್ಮದ್ ರಫೀಕ್, ಸಮೀವುಲ್ಲಾ ನಡುವೆ ಪೈಪೋಟಿ ಉಂಟಾದರೂ ಕೆ.ವಿ.ಶ್ರೀಧರ್ ಆಯ್ಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಜಾ.ದಳದ ಎಂ.ಎಸ್.ಶೋಭಾ, ವಿ.ರಮೇಶ್ ಅವರಲ್ಲಿ ಒಬ್ಬರಿಗೆ ಅವಕಾಶ ದೊರೆಯಬಹುದು. ಒಂದು ವೇಳೆ ಈ ಸ್ಥಾನ ಬಿಜೆಪಿಗೆ ಬೇಕೆಂದು ಪಟ್ಟು ಹಿಡಿದರೆ ಶಾರದಮ್ಮ, ಎನ್.ಸೌಮ್ಯ ನಡುವೆ ಪೈಪೋಟಿ ಉಂಟಾಗುವ ಸಂಭವವಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!