ಹನೂರು: ವಿಧಾನಸಭಾ ಕ್ಷೇತ್ರದ ಮಿಣ್ಯಂ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ಶಾಸಕ ಆರ್ ನರೇಂದ್ರ 2ಅಡಿ ನೀರಿನಲ್ಲಿ ತಮ್ಮ ಚಪ್ಪಲಿಯನ್ನು ಕೈಯಲ್ಲಿಡಿದುಕೊಂಡು ಹಳ್ಳ ದಾಟುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಳ್ಳೇಗಾಲ ಶಾಸಕ ಎನ್ ಮಹೇಶ್ ರವರು ಸುವರ್ಣಾವತಿ ಹೊಳೆ ಉಕ್ಕಿ ಹರಿದ ಪರಿಣಾಮ ಮಾಂಬಳ್ಳಿ ಗ್ರಾಮದ ಕೆಲವು ಬಡಾವಣೆಗಳಲ್ಲಿ ನೀರು ತುಂಬಿಕೊಂಡಿತ್ತು. ಇದನ್ನು ಪರಿಶೀಲನೆ ನಡೆಸಲು ತೆರಳಿದ್ದ ವೇಳೆ ರಸ್ತೆಯ ಮೇಲೆ ಕೇವಲ ಅರ್ಧ ಅಡಿ ನೀರಿದ್ದರೂ ಸಹ ತೆಪ್ಪದಲ್ಲಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶಕ್ಕೆ ಒಳಗಾಗಿದ್ದಾರೆ.
ಇತ್ತ ಹನೂರು ಶಾಸಕ ಆರ್ ನರೇಂದ್ರ ಮಂಗಳವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದ ಕುಟುಂಬಕ್ಕೆ ಸಾಂತ್ವನ ತಿಳಿಸಲು ಮಿಣ್ಯಂ ಗ್ರಾಮಕ್ಕೆ ತೆರಳಿದ್ದ ವೇಳೆ ಹಳ್ಳದಲ್ಲಿ 2ಅಡಿಗೂ ಹೆಚ್ಚು ನೀರು ಹರಿಯುತ್ತಿತ್ತು .
ಈ ಹಿನ್ನೆಲೆ 2ಅಡಿ ನೀರಿನಲ್ಲಿ ತಮ್ಮ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.