ಇತ್ತೀಚೆಗಿನ ದಿನಗಳಲ್ಲಿ ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಹಣ ದೋಚುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಪೊಲೀಸರು ಎಷ್ಟೇ ಎಚ್ಚರಿಸಿದರೂ ಕೆಲವರು ಕಿಡಿಗೇಡಿಗಳ ಹೊಸ ಯೋಜನೆಗಳಿಗೆ ಸಿಲುಕಿ ಸಾರ್ವಜನಿಕರು ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಇದೀಗ ಅಂತಹದ್ದೇ ಒಂದು ಪ್ರಕರಣ ಮೈಸೂರಿನಲ್ಲಿ ದಾಖಲಾಗಿದೆ.
ನಗರದ ಸಿದ್ದಾರ್ಥನಗರದ ನಿವಾಸಿ ಅರ್ಪಿತ ಎಂಬ ಮಹಿಳೆ 98,887 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಫೆಡ್‌ಎಕ್ಸ್ ಪಾರ್ಸೆಲ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗುತ್ತಿದೆ. ನಿಮ್ಮ ಆಧಾರ್ ಕಾರ್ಡ್ ಬಳಸಿ ಮಾಡಿರುವ ಆರ್ಡರ್‌ನಲ್ಲಿ ಮಾದಕ ವಸ್ತು ಹಾಗೂ ಪಾಸ್‌ಪೋರ್ಟ್‌ಗಳನ್ನು ಸಾಗಿಸಲಾಗುತ್ತಿದೆ ಎಂದು ಕಿಡಿಗೇಡಿ ಕರೆ ಮಾಡಿ ಅರ್ಪಿತ ಬಳಿ ಹೇಳಿದ್ದಾನೆ. ತಾನು ಮುಂಬೈ ಪೊಲೀಸ್ ಎಂದೂ ಸಹ ಹೇಳಿಕೊಂಡಿದ್ದಾನೆ.
ಈ ಮಾತನ್ನು ನಂಬಿದ ಅರ್ಪಿತ ಆತ ಕೇಳಿದಂತೆ ಹಣವನ್ನು ಕಳುಹಿಸಿಕೊಟ್ಟಿದ್ದಾರೆ. ಬಳಿಕ ತಾನು ಆತನಿಂದ ಮೋಸ ಹೋದ ವಿಷಯ ತಿಳಿದುಬಂದಿದ್ದು ಮೈಸೂರು ಸೈಬರ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.