Mysore
16
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ದಸರಾಗೆ ಯುನೆಸ್ಕೊ ಮಾನ್ಯತೆ: ತಿರುಗದ ಆಡಳಿತ ಯಂತ್ರ

ಜನಪ್ರತಿನಿಧಿಗಳು,ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎಂದು ಆರೋಪಿಸಿದ ಪ್ರಜ್ಞಾವಂತ ಮೈಸೂರಿಗರು

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ನಾಲ್ಕು ಶತಮಾನಗಳ ಸಂಸ್ಕೃತಿ-ಪರಂಪರೆ ಇತಿಹಾಸ ಹೊಂದಿರುವ ಮೈಸೂರು ದಸರಾಗೆ ವಿಶ್ವ ಸಂಸ್ಥೆಯ ಶೈಕ್ಷಣಿಕ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ನೀಡುವ ಇನ್ ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್(ಸಾಂಸ್ಕೃತಿಕ ಅಮೂರ್ತ ಪರಂಪರೆ) ಮಾನ್ಯತೆಗೆ ಅರ್ಜಿ ಸಲ್ಲಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲವು ವರ್ಷಗಳಿಂದ ಎದ್ದಿದ್ದ ಕೂಗು ಗುರಿ ತಲುಪುವಲ್ಲಿ ವಿಫಲವಾಗಿದೆ.
ಡಿ.ರಂದೀಪ್ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಪರಂಪರೆ ಸಮಿತಿ ನಡೆದ ಸಭೆಯಲ್ಲಿ ಸಮಿತಿಯ ಸದಸ್ಯ ಹಾಗೂ ಪ್ರಾಚೀನ ಪುರಾತತ್ವ ನಿವೃತ್ತ ಪ್ರಾಧ್ಯಾಪಕರಾಗಿದ್ದ ಪ್ರೊ.ಎನ್.ಎಸ್.ರಂಗರಾಜು ಅವರು ಯುನೆಸ್ಕೊ ನೀಡುವ ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ನೀಡಲು ಮನವಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ನಂತರ ಇದಕ್ಕೆ ಸಮಿತಿ, ಜಿಲ್ಲಾಧಿಕಾರಿಗಳು ಹಾಗೂ ಪ್ರವಾಸ್ಯೋದಮ ಇಲಾಖೆಯು ಒಪ್ಪಿಗೆ ಸೂಚಿಸಿತ್ತು. ಆದರೆ, ಈ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಪುರಾತತ್ವ ಇಲಾಖೆಗೆ ಪೂರ್ಣ ಪ್ರಮಾಣ ಅಧಿಕಾರಿಯ ನೇಮಕವಾಗದಿದ್ದ ಕಾರಣಗಳಿಂದ ವರ್ಷಗಳು ಉರುಳುತ್ತಾ ಹೋದರು ಯುನೆಸ್ಕೋಗೆ ಅರ್ಜಿ ಸಲ್ಲಿಸುವ ಕಾರ್ಯವೂ ನಡೆದಿಲ್ಲದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
೧೬೧೦ರಲ್ಲಿ ರಾಜ ಒಡೆಯರ್ ದಸರಾ ಮಹೋತ್ಸವ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ದಸರಾ ಮಹೋತ್ಸವ ತನ್ನದೇ ಆದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಈಗ ಮೈಸೂರೆಂದರೆ ದಸರಾ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ. ೪೧೩ನೇ ದಸರಾ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು. ಹತ್ತಾರು ಕೋಟಿ ರೂ.ಗಳು ವೆಚ್ಚವಾಯಿತು. ಆದರೂ ಯುನೆಸ್ಕೊ ಮಾನ್ಯತೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾತ್ರ ಶುರುವಾಗಿಲ್ಲ.


ಯುನೆಸ್ಕೋ ಮಾನ್ಯತೆ ಪಡೆದರೇ ಆಗುವ ಲಾಭ
ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ಹಾಗೂ ಯುನೆಸ್ಕೋ ಕ್ಯಾಲೆಂಡರ್‌ನಲ್ಲಿ ದಸರಾವನ್ನು ಸೇರಿಸುವುದರಿಂದ ಜಗತ್ತಿನ ಎಲ್ಲ ಖಂಡಗಳಿಗೂ ದಸರೆಯ ಮಹತ್ವ ತಿಳಿಯಲಿದೆ. ಏಷ್ಯಾ ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ ತಿಳಿದಿರುವ ಮೈಸೂರು ದಸರಾ ಮಹೋತ್ಸವದ ಬಗ್ಗೆ ಉಳಿದ ಖಂಡಗಳಲ್ಲಿ ದಸರೆಯ ಪರಂಪರೆ ಮತ್ತು ಸಂಸ್ಕೃತಿಯ ಅರಿವು ಹೆಚ್ಚಾಗಲಿದೆ.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಜಾಗತಿಕ ಪ್ರವಾಸ್ಯೋದಮ ಬೆಳೆವಣಿಗೆಯೂ ಆಗಲಿದೆ. ಯುನೆಸ್ಕೋದ ಅನುದಾನ ಪ್ರತಿವರ್ಷ ಸಿಗಲಿದೆ. ದಸರಾ ಪರಂಪರೆ ರಕ್ಷಣೆಗೆ ಸಮಿತಿ ರಚಿಸಿ ಸಾಂಸ್ಕೃತಿಕ ಉತ್ತೇಜನ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದಸರೆಗೆ ಮಹತ್ವ ಲಭ್ಯವಾಗುತ್ತದೆ. ಆ ಮೂಲಕ ಮೈಸೂರಿನ ಸಮಗ್ರ ಅಭಿವೃದ್ಧಿಗೂ ನೆರವಾಗಲಿದೆ ಎಂಬುದು ಮೈಸೂರಿನ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.


ಮಾನ್ಯತೆಗೆ ಒಂದು ವರ್ಷ ಬೇಕು
ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ನೀಡಲು ಯುನೆಸ್ಕೋಗೆ ಅರ್ಜಿ ಸಲ್ಲಿಸಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಪರಂಪರೆ ಮತ್ತು ಸಂಸ್ಕೃತಿ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿ, ಮೈಸೂರಿಗೆ ಕಳುಹಿಸಿಕೊಡಲಾಗುತ್ತದೆ. ಸಮಿತಿಯು ಅಧ್ಯಯನ ನಡೆಸಿದ ಬಳಿಕ ಯುನೆಸ್ಕೋಗೆ ವರದಿ ಸಲ್ಲಿಸುತ್ತದೆ. ಈ ಆಧಾರದಲ್ಲಿ ಯುನೆಸ್ಕೋ ಇನ್‌ಟ್ಯಾಂಜಿಬಲ್ ಕಲ್ಚರ್ ಹೆರಿಟೇಜ್ ಟ್ಯಾಗ್ ನೀಡುವುದನ್ನು ನಿರ್ಧರಿಸುತ್ತದೆ. ಈ ಪ್ರಕ್ರಿಯೆಗಳು ಅಂದುಕೊಂಡತೆ ನಿರಂತರವಾಗಿ ನಡೆದರೂ ಒಂದು ವರ್ಷದ ಅವಧಿ ಹಿಡಿಯುತ್ತದೆ. ಹೀಗಾಗಿ ಯುನೆಸ್ಕೋ ಮಾನ್ಯತೆ ಮಾಡಬೇಕಾದ ಮೊದಲ ಪ್ರಕ್ರಿಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಮಾಡಬೇಕಾಗಿದೆ.


ಯುನೆಸ್ಕೊಗೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಆದರೆ, ಕೆಲ ವರ್ಷಗಳಿಂದ ಪ್ರಾಚೀನ ಮತ್ತು ಪುರಾತತ್ವ ಇಲಾಖೆಯಲ್ಲಿ ಪೂರ್ಣ ಪ್ರಮಾಣದ ಆಯುಕ್ತರು ನೇಮಕ ಆಗದಿರುವ ಕಾರಣ ವಿಳಂಬವಾಗಿದೆ.

ಪ್ರೊ.ಎನ್.ಎಸ್.ರಂಗರಾಜು, ಪರಂಪರೆ ಸಮಿತಿ ಸದಸ್ಯ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!