Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರಿನಲ್ಲಿ ಇಂದೇ ನಡೆಯಿತು ಮಿನಿ ಜಂಬೂಸವಾರಿ

ಮೈಸೂರು: ಅಲ್ಲಿ ದಸರಾ ಜಂಬೂ ಸವಾರಿಯಲ್ಲಿ ಕಾಣುವ ಎಲ್ಲ ಆಕರ್ಷಣೆಗಳಿದ್ದವು. ಗಂಭೀರ ನಡೆಯ ಗಜಪಡೆಯಿತ್ತು. ಅತ್ಯಾಕರ್ಷಕ ಸ್ತಬ್ಧ ಚಿತ್ರಗಳಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆಯನ್ನೂ ಮಾಡಿದರು.ಚಿನ್ನದ ಅಂಬಾರಿ ಹೊರತುಪಡಿಸಿ ಅಲ್ಲಿ ಮಿನಿ ದಸರಾದ ಎಲ್ಲ ತುಣುಕುಗಳಿದ್ದವು.
ಮೈಸೂರು ನಗರದ ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮೀ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮದ ಜಾಥಾ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ವಿಶ್ವ ಪ್ರವಾಸೋದ್ಯಮದ ಜಾಥಾಕ್ಕೆ ಚಾಲನೆ ನೀಡಿದರು.

 

ಪ್ರವಾಸಿಗರ ಮನ ಸೆಳೆದ ಕಲಾತಂಡಗಳು

ಇದೇ ಸಂದರ್ಭದಲ್ಲಿ ನಾನಾ ರಾಜ್ಯಗಳ ಸಂಸ್ಕೃತಿಗಳನ್ನು ಬಿಂಬಿಸುವ ವೇಷಭೂಷಣಗಳು ಎಲ್ಲರ ಗಮನಸೆಳೆದವು. ಬ್ಯಾಂಡ್‍ಸೆಟ್, ಡೊಳ್ಳುಕುಣಿತ , ಕಂಸಾಳೆನೃತ್ಯ, ತಮಟೆವಾದನ, ಹುಲಿವೇಷ, ಕಲಾ ತಂಡಗಳು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ನೋಡುಗರ ಗಮನ ಸೆಳೆದವು.
ಬಳಿಕ ಮಾತನಾಡಿದ ಸಚಿವರು, ಟ್ರಾವೆಲ್ಸ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ನಾನಾ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿರುವ ಈ ಮೆರವಣಿಗೆ ಪ್ರವಾಸಿಗರನ್ನು ಸೆಳೆಯಲು ಸಹಕಾರಿಯಾಗಲಿದೆ ಎಂದರು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಚೇತರಿಕೆ ಸಿಗಲಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಗೋಲ್ಡ್ ಪಾಸ್ ಬಗ್ಗೆ ರೂಪುರೇಷೆಗಳನ್ನು ಮಾಡಿದ ನಂತರ ಸಭೆಯಲ್ಲಿ ತಿರ್ಮಾನ ಕೈಗೊಂಡು ತಿಳಿಸಲಾಗುವುದು ಎಂದರು.
ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಟ್ರಾವೆಲ್ಸ್ ಅಸೋಸಿಯೇಷನ್‌ ಪ್ರಶಾಂತ್, ಜಯಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಎಸ್.ನಾಗರಾಜ್, ಎಸ್.ಜೆ.ಅಶೋಕ್, ಎಸ್.ನಾಗರಾಜ್ ಮತ್ತಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ