ಮೈಸೂರು ಪರಂಪರೆಯ ಗತವೈಭವ ನೆನಪಿಸಿದ ಮಟ್ಟಿ ಕುಸ್ತಿ
ಮೈಸೂರು: ತೊಡೆ ತಟ್ಟಿ ಇಡೀ ಮೈದಾನವನ್ನೇ ಝಲ್ ಅನಿಸಿದ ಪೈಲ್ವಾನರು, ಮೈಯೆಲ್ಲ ಮಣ್ಣಾಗಿಸಿಕೊಂಡು ಗೆಲ್ಲುವ ಗುರಿಯೊಂದಿಗೆ ನಡೆದ ಕಾದಾಟ… ಎದುರಾಳಿಯ ಚಿತ್ ಮಾಡಿದವರ ಪರ ಕೇಕೆ ಹಾಕಿದ ಜನಸ್ತೋಮ… ನಗರದ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಮೊದಲ ದಿನವಾದ ಸೋಮವಾರ ಮೈಸೂರು ಪರಂಪರೆಯ ಗತವೈಭವ ಸಾರುವ ಪ್ರಮುಖ ಆರ್ಕಷಣೆಗಳಲ್ಲಿ ಒಂದಾದ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಕಂಡುಬಂದ ದೃಶ್ಯಗಳಿವು. ಆರಂಭವಾದ ಮೊದಲ ಪಂದ್ಯದಲ್ಲಿ” ಭಾರತೀಯ ಕೇಸರಿʼ ಬಿರುದಾಂಕಿತ ಭಾರತ ಕೇಸರಿ ಸೀನಿಯರ್ ಮೆಡಲಿಸ್ಟ್ ವಿಕಾಸ ಕಾಳ ಮತ್ತು ಕೊಲ್ಹಾಪುರದ ಪೈಲ್ವಾನ್ ಸಿದ್ದೇಶ್ವರ ಮೌಲಿ ಜಮದಾಳೆ ದೂಳೆಬ್ಬಿಸಿದರು.

ಜಾರುವ ಮೈಗೆ ಮೈ ಕೊಡುವುತ್ತ ಹಾಕುತ್ತಿದ್ದ ಪಟ್ಟುಗಳನ್ನು ಮೊದಲಾರ್ಧದಲ್ಲಿ ಸಡಿಲಿಸುತ್ತಿದ್ದ ಕಾಳೆ ದ್ವಿತೀಯಾರ್ಧದಲ್ಲಿ ಮೇಲುಗೈ ಸಾಧಿಸಿದ್ದಲ್ಲದೆ ಎರಡು ಬಾರಿ ಎದುರಾಳಿಯನ್ನು ಮಣ್ಣಿಗೆ ಕೆಡವಿದರು. ರಕ್ಷಣಾತ್ಮಕವಾಗಿ ಆಡಿದ ಕಾಳೆ ಕೊನೆಯವರೆಗೂ ಸಿದ್ದೇಶ್ವರ ಪಟ್ಟುಗಳನ್ನು ಸಡಿಲಿಸುತ್ತ ಕುಸ್ತಿಪ್ರಿಯರ ಶಿಳ್ಳೆ ಚಪ್ಪಾಳೆಗಳನ್ನು ಗಿಟ್ಟಿಸಿದರು. ಮೈಸೂರು ಶೈಲಿಯ ಕುಸ್ತಿ ನಿಯಮದಂತೆ ಚಿತ್ ಮಾಡಬೇಕು. ಆದರೆ, ಕಣದಿಂದ ಆಚೆಗಟ್ಟಿ ಗೆಲ್ಲಲು ಇಬ್ಬರೂ ಪೈಲ್ವಾನರು ನೋಡಿದರು. ನಿಯಮ ಅರಿತ ನಂತರ ಅಂಗಳದಲ್ಲಿಯೇ ಪೈಪೋಟಿ ನಡೆಸಿದರು. ಆದರೆ, ಪಂದ್ಯಾ ಡ್ರಾನಲ್ಲಿ ಅಂತ್ಯಗೊಂಡಿತು.

ಮೊದಲ ಪಂದ್ಯದಲ್ಲಿ ವಾಗ್ವಾದ: ನಿಯಮ ಸರಿಯಾಗಿ ತಿಳಿಯದ ಕೊಲ್ಲಾಪುರದ ಪೈಲ್ವಾನ್ ಸಿದ್ದೇಶ್ವರ ಮೌಲಿ ಜಮದಾಳೆ ನಿಯಮದಲ್ಲಿ ಗೊಂದಲದಿಂದ ವಾಗ್ವಾದಕ್ಕೆ ಕಾರಣವಾಗಿತ್ತು. ಜಮದಾಳೆ ತಮ್ಮ ಭಾಗದ ಮಾದರಿಯಲ್ಲಿ ಚಿತ್ ಮಾಡಲು ಯತ್ನಿಸಿದರು. ಇದಕ್ಕೆ ತೀರ್ಪುಗಾರರು ಮೈಸೂರಿನ ಮಾದರಿಯಲ್ಲಿಯೇ ಕುಸ್ತಿ ಚಿತ್ ಆಗಬೇಕು ಎಂದು ಹೇಳಿದರು. ಇದರಿಂದ ಗೊಂದಲಕ್ಕೀಡಾದರು. ಹೊರಗಿದ್ದ ತನ್ನ ಆಪ್ತರನ್ನು ಅಖಾಡಕ್ಕೆ ಕರೆದ ಪೈಲ್ವಾನ್ ಈ ನಿಯಮವನ್ನು ಪ್ರಶ್ನಿಸಿದರು. ಈ ವೇಳೆ ತೀರ್ಪುಗಾರರ ಪರವಾಗಿ ಶಾಸಕ ಎಲ್.ನಾಗೇಂದ್ರ ಮನವರಿಕೆ ಮಾಡಲು ಯತ್ನಿಸಿದರೂ, ಈ ಸಂದರ್ಭದಲ್ಲಿ ಪೈಲ್ವಾನ್ ದುರ್ವತನೆ ತೋರಿದರು. ಆಗ ಹೊರಗಿನ ಪ್ರೇಕ್ಷಕರು ಗದರಿದರು. ಕೆಲವರು ಅವಾಚ್ಯವಾಗಿ ನಿಂದಿಸಿದರು.
ನಿಂದಿಸಿದವರನ್ನು ಅಖಾಡಕ್ಕೆ ಬಾ ಎಂದ ಪೈಲ್ವಾನ್: ಕೊಲ್ಲಾಪುರದ ಪೈಲ್ವಾನ್ ಸಿದ್ದೇಶ್ವರ ಮೌಲಿ ಜಮದಾಳೆ ಅಖಾಡದಲ್ಲಿರುವ ತೋರಿದ ದುರ್ವತನೆಗೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ “ಕುಸ್ತಿ ಮಾಡಲೋʼ ಎಂದು ಏರು ಧ್ವನಿಯಲ್ಲಿ ಗದರಿದರು. ಈ ವೇಳೆ ಪೈಲ್ವಾನ್ ಜಮದಾಳೆ “ಮಟ್ಟಿ ಮಣ್ಣಿಗೆ ಇಳಿಯುವಂತೆʼ ಕೈ ಸನ್ನೆ ಮಾಡಿದರು. ಈ ಸಂದರ್ಭದಲ್ಲಿ ಕೆಲವರು ಅಖಾಡಕ್ಕೆ ಏರಿದರು. ಆದರೆ ಕೆಲ ನಿಮಿಷಗಳಲ್ಲಿ ಪರಿಸ್ಥಿತಿ ತಿಳಿಯಾಯಿತು.
ಕುಸ್ತಿಗೆ ಎಸ್‌ಟಿಎಸ್ ಚಾಲನೆ: ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, “” ನಾನು ಒಂದು ಆಫರ್ ಕೊಟ್ಟಿದ್ದೆ. ನಾನು, ನಾರಾಯಣ ಗೌಡ ಇಬ್ಬರು ಕುಸ್ತಿಗೆ ರೆಡಿ ಇದ್ವಿ. ದಸರಾ ಕುಸ್ತಿ ಉಪ ಸಮಿತಿಯ ವಿಶೇಷಾಧಿಕಾರಿ ನಂದಿನಿ ಅವರಿಗೆ ಒಂದು ಕುಸ್ತಿ ಆಡಿಸುವಂತೆ ಕೇಳಿದೆ. ಅವರು ಒಪ್ಪಿಗೆ ನೀಡಲಿಲ್ಲ. ಪಂದ್ಯ ನಡೆದಿದ್ದರೆ ಮೈಸೂರ ಅಥವಾ ಮಂಡ್ಯನಾ ಅಂತಾ ಗೋತ್ತಾಗೋದು. ಶಾಸಕ ಎಲ್.ನಾಗೇಂದ್ರ ಮೊದಲು ಗರಡಿ ಮನೆಯಲ್ಲಿ ಲಡತ್ ಮಾಡಿ ಉತ್ತಮ ಮೈ ಕಟ್ಟನ್ನು ಹೊಂದಿದ್ದ ಪೈಲ್ವಾನ್ ಆಗಿದ್ರು. ಆದರೆ ರಾಜಕೀಯಕ್ಕೆ ಬಂದ ಮೇಲೆ ಮೈ ಕಟ್ಟು ಸಡಿಲವಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ನಾರಾಯಣಗೌಡ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಅಪರ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ದಸರಾ ಕುಸ್ತಿ ಉಪಸಮಿತಿಯ ಅಧ್ಯಕ್ಷ ಕೆ.ದೇವರಾಜ್, ಉಪಾಧ್ಯಕ್ಷರಾದ ವೇದರಾಜ್ ಎಸ್.ಹೂಟಗಳ್ಳಿ, ಮಹೇಶ್ ರಾಜೇ ಅರಸ್, ಎಂ.ಎಂ.ರಾಜೇಗೌಡ, ಕಾರ್ಯಾಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ಎಸ್.ಜೆ.ಹರ್ಷವರ್ಧನ ಮುಂತಾದವರು ಹಾಜರಿದ್ದರು.





