ಮದುವಣಗಿತ್ತಿಯoತಾದ ಸಾಂಸ್ಕೃತಿಕ ನಗರ : ಮೊದಲ ಬಾರಿಗೆ ರಾಷ್ಟ್ರಪತಿ ಚಾಲನೆ ಸಡಗರ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವಿಧ್ಯುಕ್ತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ೧೦ ದಿನಗಳ ಕಾಲ ನಡೆಯಲಿರುವ ನಾಡಹಬ್ಬಕ್ಕೆ ಸೋಮವಾರ ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆೊಂಡನೆ ಚಾಲನೆ ನೀಡಲಾಗುವುದು.
ಕೊರೊನಾ ಕಾರಣಕ್ಕಾಗಿ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ದಸರಾ ಮಹೋತ್ಸವವನ್ನು ಈ ಬಾರಿ ಸಾಂಪ್ರದಾಯಿಕ- ಜನಾಕರ್ಷಣೆಯೊಂದಿಗೆ ಅದ್ಧೂರಿಯಾಗಿ ಆಚರಿಸುವುದಕ್ಕಾಗಿ ರಾಜ್ಯ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ೧೦ ದಿನಗಳ ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ಅವರನ್ನು ಬೆಳಿಗ್ಗೆ ೮.೩೦ಕ್ಕೆ ಪೊಲೀಸ್ ನಂದಿಧ್ವಜ, ಮಂಗಳವಾದ್ಯ, ವೀರಗಾಸೆ, ತಮಟೆ, ನಗಾರಿಮೇಳ ಮುಂತಾದ ಜಾನಪದ ತಂಡಗಳ ಮೆರವಣಿಗೆ, ಪೂರ್ಣಕುಂಭ ಸ್ವಾಗತದ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಅವರ ಹಾಜರಿಯಲ್ಲಿ ನಾಡ ಆಧಿದೇವತೆ ಚಾಮುಂಡೇಶ್ವರಿದೇವಿಯ ಅಗ್ರ ಪೂಜೆ ನಡೆಯಲಿದೆ. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಪಕ್ಕದಲ್ಲೇ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ಬೆಳಿಗ್ಗೆ ೯.೪೫ರಿಂದ ೧೦.೦೫ರೊಳಗೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ, ಜ್ಯೋತಿ ಬೆಳಗಿಸುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು.
ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸುನಿಲ್‌ಕುಮಾರ್, ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್, ಆನಂದ್ ಸಿಂಗ್, ಮಹಾಪೌರ ಶಿವಕುಮಾರ್ ಅತಿಥಿಗಳಾಗಿ ಹಾಜರಿರುತ್ತಾರೆ. ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ವಿಧ್ಯುಕ್ತ ಚಾಲನೆ ಸಿಗುತ್ತಿದ್ದಂತೆ, ಇತ್ತ ಉಳಿದಂತೆ ನಾನಾ ಕಡೆ ಇರುವ ೧೦ ವೇದಿಕೆಗಳಲ್ಲಿ ಬಹುತೇಕ ದಸರಾ ಮಹೋತ್ಸವ ಕಾರ್ಯಕ್ರಮಗಳು ಸಡಗರ, ಸಂಭ್ರಮದಿಂದ ಪ್ರಾರಂಭವಾಗಲಿದೆ.
ಸಂಜೆ ೬ ಗಂಟೆಗೆ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಸ್.ಎ.ರಾಮದಾಸ್ ವಹಿಸಲಿದ್ದು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮಹಾಪೌರ ಶಿವಕುಮಾರ್ ಇನ್ನಿತರರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮೊದಲ ದಿನದ ಕಾರ್ಯಕ್ರಮ
ಕೈಗಾರಿಕಾ ವಿಚಾರಸಂಕಿರಣ
ದಸರಾ ಚಲನಚಿತ್ರೋತ್ಸವ
ದಸರಾ ಫಲಪುಷ್ಪ ಪ್ರದರ್ಶನ
ದಸರಾ ಆಹಾರ ಮೇಳ
ದಸರಾ ಕುಸ್ತಿ ಪಂದ್ಯಾವಳಿ
ದಸರಾ ವಸ್ತು ಪ್ರದರ್ಶನ
ಯೋಗ ದಸರಾ ನೃತ್ಯರೂಪಕ
ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ
ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ
ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ
ದಸರಾ ದೀಪಾಲಂಕಾರಕ್ಕೆ ಚಾಲನೆ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಲಿದ್ದು ಅದಕ್ಕಾಗಿ ದೇವಸ್ಥಾನದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.
ಚಾಮುಂಡಿಬೆಟ್ಟಕ್ಕೆ ರಾಷ್ಟ್ರಪತಿ ಭೇಟಿ ಹಾಗೂ ದಸರೆಗೆ ಚಾಲನೆ ನೀಡಲಿರುವ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು.