ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಉತ್ಸುಕರಾಗಿದ್ದಾರೆ. ಅ.5ರಂದು (ಇಂದು) ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಭಕ್ತಿಭಾವದಲ್ಲಿ ಮಿಂದೇಳಲು ಎಲ್ಲರೂ ತುದಿಗಾಲ ಮೇಲೆ ನಿಂತಿದ್ದಾರೆ. ಮಂಗಳವಾರ ಆಯುಧಪೂಜೆ ಸಂಭ್ರಮ ಮುಗಿದಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಅರಮನೆ ಒಳಗೆ ಇರುವ ಆಯುಧಗಳಿಗೆ ಪೂಜೆ ನೆರವೇರಿಸಲಾಗಿದೆ. ಸದ್ಯ ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ಪೂಜೆ ನಡೆಯಲಿದೆ. ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ. ಅಂಬಾರಿಯಲ್ಲಿ ಪ್ರತಿಷ್ಠಾಪನೆಯಾಗುವ ದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 5.07ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡಲಿದ್ದಾರೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಭಾಗಿಯಾಗಿದ್ದರು.