ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಗೌಸಿಯಾನಗರದ ನಿವಾಸಿ ಶಹಬಾಜ್(26) ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಸಿಯಾನಗರದ ಜುಬೇರ್ ಹಾಗೂ ಇಬ್ಬರು ಆರೋಪಿಗಳನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫ್ಯಾಬ್ರಿಕೇಟರ್ ಆಗಿ ಕೆಲಸ ಮಾಡುತ್ತಿದ್ದ ಶಹಬಾಜ್, ಗೌಸಿಯಾ ನಗರದಲ್ಲಿ ರಾತ್ರಿ ವೇಳೆ ಬಾಡಿಗೆ ಪಡೆದು ಆಟೋ ನಿಲ್ಲಿಸುವ ಜಾಗದ ನಿರ್ವಹಣೆ ಮಾಡುತ್ತಿದ್ದ. ಇದರ ಜೊತೆಗೆ ಕೆಲ ಹಣಕಾಸಿಗೆ ಸಂಬಂಧಿಸಿದಂತೆ ವ್ಯವಹಾರ ಕೂಡ ನಡೆಸುತ್ತಿದ್ದ.
ಸೋಮವಾರ ತಡರಾತ್ರಿ ಸುಮಾರು 12.30ರ ಸಮಯದಲ್ಲಿ ನಾಲ್ವರು ಸ್ನೇಹಿತರೊಂದಿಗೆ ಆಟೋದಲ್ಲಿ ಬಂದ ಜುಬೇರ್, ಆಟೋ ನಿಲ್ಲಿಸಲು ನೀಡುವ ಬಾಡಿಗೆ ವಿಚಾರದಲ್ಲಿ ಜಗಳ ಆರಂಭಿಸಿದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಸಂಬಂಧ ತನಿಖೆ ಆರಂಭಿಸಿದ್ದ ಉದಯಗಿರಿ ಠಾಣೆ ಇನ್ಸ್‌ಪೆಕ್ಟರ್ ಸುಧಾಕರ್ ಮತ್ತು ಸಿಬ್ಬಂದಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.




