ಮೈಸೂರು: ಚಿನ್ನ ಕಳ್ಳತನ ಮಾಡಿ ಗಿರಿವಿಯಿಟ್ಟು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಬ್ಯಾಡರಪುರದ ಮೋಹನ್ ಕುಮಾರ್ ಎಂಬುವವನೇ ಕೊಲೆಯಾದ ಯುವಕನಾಗಿದ್ದಾನೆ. 60 ಗ್ರಾಂ ಚಿನ್ನಕ್ಕಾಗಿ ಯುವಕನನ್ನು ಕಾರಿನಲ್ಲಿಯೇ ಹತ್ಯೆಗೈದು ದುಷ್ಕರ್ಮಿಗಳು ಶವವನ್ನು ಹಾಡಹಗಲೇ ಸುಟ್ಟು ಹಾಕಿದ್ದರು.
ಕಳೆದ ಏಪ್ರಿಲ್.18ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸಿದ ಜಯಪುರ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರಜ್ವಲ್, ಚಂದು, ಕಬೀರ್ ಕಾಳಯ್ಯ, ದರ್ಶನ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಶ್ರೀನಿವಾಸ್ ಎಂಬ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಮೃತ ಮೋಹನ್ ಕುಮಾರ್ ಲಾಡ್ಜ್‌ವೊಂದರಲ್ಲಿ ಮ್ಯಾನೇಜರ್ ಆಗಿದ್ದ. ಈ ಲಾಡ್ಜ್‌ಗೆ ಇಸ್ಪೀಟ್ ಆಡಲು ಬರುತ್ತಿದ್ದ ಆರೋಪಿ ಶ್ರೀನಿವಾಸ್, ಮೋಹನ್ ಕುಮಾರ್‌ಗೆ ಪರಿಚಯವಾಗಿದ್ದ.
ಶ್ರೀನಿವಾಸ್ ಜೂಜಿಗಾಗಿ ಪತ್ನಿಯ 60 ಗ್ರಾಂ ಚಿನ್ನದ ಸರ ತಂದಿದ್ದ. ಗಿರವಿ ಅಂಗಡಿಯವರು ಅಂದು ಗಿರವಿ ಇಟ್ಟುಕೊಂಡಿರಲಿಲ್ಲ. ಹಾಗಾಗಿ ಲಾಡ್ಜ್ ರೂಂನಲ್ಲಿ ತಲೆದಿಂಬಿನ ಕೆಳಗೆ ಚಿನ್ನದ ಸರ ಇಟ್ಟಿದ್ದ. ಹೀಗೆ ಇಟ್ಟಿದ್ದ ಚಿನ್ನದ ಸರವನ್ನು ಮೋಹನ್ ಕುಮಾರ್ ಎಗರಿಸಿದ್ದ.
ಬಳಿಕ ಸ್ವಗ್ರಾಮ ಬ್ಯಾಡರಪುರಕ್ಕೆ ತೆರಳಿ ಕದ್ದ ಚಿನ್ನದ ಸರ ಗಿರವಿಯಿಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ಬಗ್ಗೆ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶ್ರೀನಿವಾಸ್, ಮೋಹನ್ ಕುಮಾರ್‌ನನ್ನು ಮನೆಯಿಂದ ಕರೆಯಿಸಿ ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದ. ಬಳಿಕ ಗುಮಚನಹಳ್ಳಿ ಬಳಿ ಹಾಡಹಗಲೇ ಶವ ಸುಟ್ಟು ಹಾಕಿ ಶ್ರೀನಿವಾಸ್ ಆಂಡ್ ಗ್ಯಾಂಗ್ ಪರಾರಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.





