ಆರು ಜನ ಯೋಗ ಸಾಧಕರಿಗೆ “ಯೋಗಸಿರಿ” ಪ್ರಶಸ್ತಿ ಪ್ರಧಾನ
ಮೈಸೂರು: ದೇಹ, ಮನಸ್ಸಿನ ಆರೋಗ್ಯಕ್ಕೆ ಯೋಗ ಸಹಕಾರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಇಂದು(ಅ.4) ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಸಿಯೇಷನ್ ಸಭಾಭವನದಲ್ಲಿ ನಡೆದ ಯೋಗ ದಸರಾ, ಯೋಗ ನೃತ್ಯರೂಪಕ ಮನರಂಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ದಸರಾವನ್ನು ವೀಕ್ಷಿಸಲು ನಾನಾ ದೇಶಗಳಿಂದ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ. ಹೀಗಾಗಿ ಯೋಗಕ್ಕೆ ಕೇಂದ್ರಾವಾಗಿರುವ ನಗರ ಮೈಸೂರು ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರು ದಸರಾ ನಮ್ಮ ನಾಡಿನ ಪ್ರತಿಷ್ಠೆ ಮತ್ತು ಹೆಮ್ಮೆಯನ್ನು ಹೆಚ್ಚಿಸುವಂತಹ ಹಬ್ಬವಾಗಿದ್ದು, ಇಂಥಹ ಹಬ್ಬದಲ್ಲಿ ಯೋಗಾ ದಸರಾವು ಕೂಡ ವಿಶ್ವದಲ್ಲೇ ಪ್ರಖ್ಯಾತಿಯನ್ನು ಹೊಂದಿದೆ. ನವರಾತ್ರಿಯ 9 ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕ್ರೀಡೆ, ವಿಭಿನ್ನ ವೈಶಿಷ್ಟ್ಯವಾದ ಕಾರ್ಯಕ್ರಮಗಳನ್ನು ಲಕ್ಷಾಂತರ ಜನರು ವೀಕ್ಷಿಸಿ ಆನಂದಿಸುತ್ತಾರೆ ಎಂದರು.
ಅನೇಕರು ಯೋಗ ಕಲಿಯಲು, ತಿಳಿದುಕೊಳ್ಳಲು ಹಾಗೂ ಅಭ್ಯಾಸ ಮಾಡುವುದಕ್ಕೆ ವಿಶ್ವದಾದ್ಯಂತ ಮೈಸೂರಿಗೆ ಆಗಮಿಸುತ್ತಾರೆ. ಯೋಗವು ನಮ್ಮ ಶರೀರ, ಮನಸ್ಸು ಮತ್ತು ಅಧ್ಯಾತ್ಮಿಕ ಬೆಳವಣಿಗೆಗೆ ಪರಿಣಾಮಕಾರಿಯಾದ ಅಂಶವಾಗಿದ್ದು, ದೇಹ ಮತ್ತು ಮನಸ್ಸನ್ನು ನಿಯಂತ್ರಣ ಮಾಡಲು ಸಹಕಾರಿಯಾಗಿದೆ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗವನ್ನು ಪರಿಚಯಿಸಿದ ಮೊದಲಿಗರೆಂದರೆ ಸ್ವಾಮಿ ವಿವೇಕಾನಂದರು. ಆರೋಗ್ಯ ಇಲಾಖೆಯು ಯೋಗಕ್ಕೆ ಹೆಚ್ಚಿನ ಗಮನವನ್ನು ನೀಡುತ್ತಾ ಬಂದಿದೆ. ಪ್ರತಿನಿತ್ಯ ಯೋಗಾಸನವನ್ನು ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು. ಒಳ್ಳೆಯ ಆರೋಗ್ಯಕ್ಕಾಗಿ ನಾವು ಶಿಸ್ತಿನ ಜೀವನವನ್ನು ನಡೆಸುವುದರಿಂದ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಇರುವುದಿಲ್ಲ.
ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಮಾನಸಿಕ ಖಿನ್ನತೆ ಎಲ್ಲದಕ್ಕೂ ಯೋಗ ಒಂದೇ ಸೂಕ್ತ ಪರಿಹಾರವಾಗಿದೆ ಎಂದು ಕಿವಿಮಾತು ಹೇಳಿದರು.
“ಯೋಗ ಸಿರಿ” ಪ್ರಶಸ್ತಿ ಪ್ರಧಾನ
ಯೋಗದಲ್ಲಿ ಸಾಧನೆ ಮಾಡಿದ ಯೋಗ ಸಾಧಕರುಗಳಾದ ದೇವರಾಜು, ಯೋಗಕುಮಾರ್ , ಸತ್ಯವತಿ, ಚಂದ್ರು, ಬಾಪು ಆರ್ ನಚೀಕೇತ ಹಾಗೂ ರಮಾ ಆರ್ ಕೆದ್ಲಾಯ ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಗನೃತ್ಯ ರೂಪಕ ಪ್ರದರ್ಶನ
ಭೂಮಿ ಮೇಲಿನ ನಕ್ಷತ್ರವೆನ್ನುವ ವಿಶೇಷ ಚೇತನ ಮಕ್ಕಳು ಯೋಗದ ವಿವಿಧ ಭಂಗಿಗಳನ್ನು ನೃತ್ಯದ ಮೂಲಕ ಪ್ರದರ್ಶನ ಮಾಡಿ ಮಹತ್ವ ಸಾರಿದರು.
ಭೂಮಿ ಸೇನಾ ಜೋಷಿ ಅವರ ಧ್ವನಿಯಲ್ಲಿ ‘ಮಿಲೆ ಸುರ್ ಮೇರಾ ತುಮಾರಾ…’ ಹಾಡಿಗೆ ಮೈಸೂರಿನ ವಿಸ್‌ಡಂಬ್ ವಿಶೇಷ ಚೇತನ ಶಾಲೆಯ ಮಕ್ಕಳು ಪ್ರದರ್ಶನ ಮಾಡಿದ ಯೋಗ ನೃತ್ಯಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾದಿಯಾಗಿ ನೆರೆದಿದ್ದವರು ಮನಸೋತು ಚಪ್ಪಾಳೆಗಳ ಮಳೆಗೈದರು.
ಸ್ವಾಮಿ ವಿವೇಕಾನಂದ ಯೋಗ ಸಮಿತಿಯ ಮಹಿಳೆಯರು ಕ್ಲಿಷ್ಟಕರ ಆಸನಗಳನ್ನು ನೃತ್ಯದಲ್ಲಿ ಜೊತೆಗೆ ತಂದು ಯೋಗ ಮತ್ತು ನೃತ್ಯವೂ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂದೇಶ ಸಾರಿದರು.
ಇದರ ಜೊತೆಗೆ ಆಯುಷ್ ಆಯುರ್ವೇದಿಕ್ ವಿದ್ಯಾರ್ಥಿನಿಯರು ಯೋಗ ರೂಪದಲ್ಲಿ ಶಿವನ ಭಂಗಿಗಳನ್ನು ಸಾದರಪಡಿಸಿದರು. ವಿಜಯನಗರದ ಎಎಎಂ ಹಂಪಿಯ ಯೋಗಾ ವಿದ್ಯಾರ್ಥಿಗಳು ಕೂಡ ಯೋಗಾದ ಅನುಕೂಲಗಳನ್ನು ಸಾರಿದರು.
ಕರ್ನಾಟಕ ಸಂಸ್ಕೃತ ವಿದ್ಯಾಲಯದ ಕುಲಪತಿಗಳಾದ ಡಾ.ಎಸ್ ಅಹಲ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣಾಧಿಕಾರಿಗಳಾದ ಡಾ.ಪಿ.ಸಿ ಕುಮಾರಸ್ವಾಮಿ, ಯೋಗ ದಸರಾ ಉಪ ಸಮಿತಿಯ ವಿಶೇಷಾಧಿಕಾರಿಯಾದ ರಮ್ಯಾ , ಆಯುಷ್ ಇಲಾಖೆಯ ಉಪ ನಿರ್ದೇಶಕರಾದ ಪುಷ್ಪಾ, ಮೈಸೂರು ಯೋಗ ಆಶೋಷಿಯೇಷನ್ ಮುಖ್ಯಸ್ಥರು, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಸರ್ಕಾರೇತರ ಸಂಸ್ಥೆಯ ಅಧ್ಯಕ್ಷರು, ಯೋಗ ಒಕ್ಕೂಟದ ಮುಖ್ಯಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.