Mysore
20
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಟಿಕೆಟ್‌ ಸಿಕ್ಕ ಬೆನ್ನಲ್ಲೇ ಪ್ರಜೆಗಳಿಗೆ ಸಂದೇಶ ನೀಡಿದ ನೀಡಿದ ರಾಜವಂಶಸ್ಥ ಯದುವೀರ್‌!

ಮೈಸೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊನೆಗೂ ಮೈಸೂರಿನ ರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಕೈ ಸೇರುವಲ್ಲಿ ಯಶಸ್ವಿಯಾಗಿದೆ. ಮೂರನೇ ಬಾರಿಗೆ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಎಂದು ಎಲ್ಲರೂ ಭಾವಿಸಿದ್ದರು. ಆದರೇ ಎಲ್ಲವೂ ನಿರೀಕ್ಷೆಗೆ ಮೀರಿದಂತೆ ರಾಜವಂಶಸ್ಥ ಯದುವೀರ್‌ ಅವರಿಗೆ ಟಿಕೆಟ್‌ ಸಿಕ್ಕಿದ್ದು, ಪ್ರಜೆಗಳಿಗೆ ಸಂದೇಶ ನಿಡಿದ್ದಾರೆ.

ಯದುವೀರ್‌ ಅವರಿಗೆ ಮೈಸೂರು-ಕೊಡಗು ಲೋಕಸಭಾ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಮಾ.16ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಒಡೆಯರ್ ಪಕ್ಷ ಸೇರಲಿದ್ದಾರೆ. ಅಂದೇ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.

ಯದುವೀರ್‌ ಅವರು ಪ್ರಜೆಗಳಿಗೆ ಬರೆದ ಪತ್ರದಲ್ಲೇನಿದೆ?

ಸಮಸ್ತ ಮೈಸೂರು-ಕೊಡಗು ಪ್ರಜಾಬಾಂಧವರಿಗೆ ನನ್ನ ನಮಸ್ಕಾರ, ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವಂತೆ, ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಭಾರತೀಯ ಜನತಾ ಪಕ್ಷದಿಂದ ಅವಕಾಶ ನೀಡಲಾಗಿದೆ.

ನಮ್ಮ ಪೂರ್ವಜರ ಮಹತ್ತರ ಕೊಡುಗೆಗಳಿಂದ ಕರ್ನಾಟಕ ಜನತೆಯ ಬೆಂಬಲ ಮತ್ತು ಭಾವನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ನಮ್ಮೊಟ್ಟಿಗಿದೆ. ಕಳೆದ ಒಂಭತ್ತು ವರ್ಷಗಳಿಂದ ನಾನು ನಮ್ಮ ಕ್ಷೇತ್ರದ ಹಾಗು ನಮ್ಮ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದು ಅನೇಕ ಪ್ರಜಾಬಾಂಧವರನ್ನು ಭೇಟಿಮಾಡುವ ಅವಕಾಶ ಸಿಕ್ಕಿದ್ದು, ನನ್ನನ್ನು ನೀವೆಲ್ಲರೂ ಮುಕ್ತವಾಗಿ ಒಬ್ಬ ಸ್ನೇಹಿತನಂತೆ ಸ್ವಾಗತಿಸಿ ಆತಿಥ್ಯವನ್ನು ನೀಡಿದ್ದೀರಿ, ಈಗ ಆ ಋಣವನ್ನು ತೀರಿಸಲು ಅವಕಾಶ ಕೇಳುತ್ತಿದ್ದೇನೆ.

ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಆಶಿಸುತ್ತಿದ್ದೇನೆ, ಹಾಗು ಮೈಸೂರು-ಕೊಡಗಿನ ಜನರ ಶುಭ ಹಾರೈಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇನೆ.

ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ನನ್ನ ಮೇಲೆ ನಂಬಿಕೆ ಇಟ್ಟಿರುವ ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೂ, ಭಾ.ಜ.ಪ ದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾ ಅವರಿಗೂ, ಮಾನನೀಯ ಗೃಹಮಂತ್ರಿಗಳಾದ ಶ್ರೀ ಅಮಿತ್ ಷಾ ಅವರಿಗೂ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಶ್ರೀ ಬಿ ಎಲ್ ಸಂತೋಷ್, ರಾಜ್ಯ ಅಧ್ಯಕ್ಷರಾದ ಶ್ರೀಯುತ ಬಿ ವೈ ವಿಜಯೇಂದ್ರ ಅವರಿಗೂ ಹಾಗೂ ವಿಶೇಷವಾಗಿ ಬಿಜೆಪಿ ಪಕ್ಷದ ಆತ್ಮ ಜೀವವಾಗಿರುವ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ನಾನು ಶ್ರೀ ಪ್ರತಾಪ್ ಸಿಂಹ ಅವರನ್ನು ಅಭಿನಂದಿಸುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ನಮ್ಮೆಲ್ಲರ ಭವಿಷ್ಯದ ಆಕಾಂಕ್ಷಿಗಳಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದೆ.
ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ಆಶಿರ್ವಾದಾನುಗ್ರಹಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೆನೆ. – ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂದು ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!