ಸಕಲೇಶಪುರ : ಮೈಸೂರು ಅರಮನೆಯ ಪಟ್ಟದ ಆನೆ ಅರ್ಜುನನ ಸಮಾದಿಗೆ ಇಂದು ಮೈಸೂರು ಅರಮನೆಯ ರಾಜರಾದ ಯದುವೀರ್ ಒಡೆಯರ್ ಹಾಗೂ ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಪೂಜೆ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಮಂಗಳವಾರ ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆಯ ನೀರ್ಕೊಲ್ಲಿ ಎಂಬಲ್ಲಿ ಕಾಡಾನೆಯೊಂದಿಗೆ ಸೆಣಸಾಡಿ ವೀರ ಮರಣ ಹೊಂದಿದ ಕ್ಯಾಪ್ಟನ್ ಅರ್ಜುನನ ಸಮಾದಿ ಸ್ಥಳಕ್ಕೆ ಇಂದು ಆಗಮಿಸಿ ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ (63 ವರ್ಷ) ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಡಿಸೆಂಬರ್ 4ರಂದು ನಡೆದ ಈ ಘಟನೆಯಲ್ಲಿ ಅರ್ಜುನ ಆನೆ ಮೃತಪಟ್ಟಿತ್ತು.