ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರಲ್ಲೇ ಕಾರ್ಯಕರ್ತರು ಗದ್ದಲ ನಡೆಸಿದ ಘಟನೆ ಇಂದು(ಏಪ್ರಿಲ್ 2) ನಡೆದಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರ ಸಭೆ ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರನ್ನು ಸ್ವಾಗತಿಸುವ ವೇಳೆ ಮಾವಿನಹಳ್ಳಿ ಸಿದ್ದೇಗೌಡ ಹೆಸರನ್ನು ಪ್ರಸ್ತಾಪಿಸಲಾಯಿತು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣವಾದ ವ್ಯಕ್ತಿಯನ್ನೇಕೆ ವೇದಿಕೆ ಏರಿಸಿದ್ದೀರಿ. ಆತನನ್ನು ಸಭೆಯಿಂದ ಹೊರ ಕಳಿಸಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಇಲ್ಲಿ ವೈಯಕ್ತಿಕ ವಿಚಾರ ಏನನ್ನು ಹೇಳಲು ಅವಕಾಶ ಇಲ್ಲ. ವೈಯಕ್ತಿಕ ಹೇಳಿಕೆ ಕೊಡಲು ಬಂದಿದ್ದರೆ ಹೊರಗೆ ಹೋಗಿ ಎಂದು ಗದರಿಸುವ ಮೂಲಕ ಗದ್ದಲವನ್ನು ತಿಳಿಗೊಳಿಸಿದರು.