ಪಿರಿಯಾಪಟ್ಟಣ: ನಿತ್ಯ ಮನೆ ಕೆಲಸ, ಕೃಷಿ ಕೆಲಸದಲ್ಲಿಯೇ ಸಂಪೂರ್ಣ ಸಮಯ ಕಳೆಯುತ್ತಿದ್ದ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮಕ್ಕಳಂತೆ ಸಂಭ್ರಮಿಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕು ಭುವನಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಇಂದು ಶಾಲಾ ಆವರಣದಲ್ಲಿ ಮಹಿಳಾ ಗ್ರಾಮಸಭೆ ಹಾಗೂ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಭುವನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪವಿತ್ರ ಅವರು, ಗ್ರಾಮೀಣ ಪ್ರದೇಶದ ಮಹಿಳೆಯರು ಕುಟುಂಬದ ನಿರ್ವಹಣೆ ಹಾಗೂ ಕೃಷಿ ಕೆಲಸದಲ್ಲಿಯೇ ತಮ್ಮ ಬಹುಪಾಲು ಸಮಯ ಕಳೆಯುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ವಿವಿಧ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಅವರು ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿಯು ಮಹಿಳೆಯರ ಸಾಧನೆ ವಿಶೇಷವಾಗಿದೆ. ಪುರುಷರನ್ನು ಮೀರಿಸುವಂತೆ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದರು.
ಗುಂಡು ಎಸೆತ, ತಟ್ಟೆ ಎಸೆತ, ಲೆಮನ್ ಅಂಡ್ ಸ್ಪೂನ್, ಮ್ಯೂಸಿಕಲ್ ಚೇರ್, ರಂಗೋಲಿ, 100 ಮೀಟರ್ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾಯಕರ್ತೆಯರು, ಪ್ರಾಥಮಿಕ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.





