ಮೈಸೂರು : ಕಾರಿನಲ್ಲಿ ಬಂದ ಮೂವರ ಗುಂಪೊಂದು ನಡುರಸ್ತೆಯಲ್ಲಿಯೇ ಆಟೋವನ್ನು ತಡೆದು ಅದರಲ್ಲಿದ್ದ ಮಹಿಳೆಯರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿರುವ ಘಟನೆ ನಗರದ ರಾಮಾಜುನ ರಸ್ತೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ 9 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದವರು ಯಾರು, ಹಲ್ಲೆ ನಡೆಸಿರುವವರು ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಶುಕ್ರವಾರ ರಾತ್ರಿ 8:45 ರಿಂದ 9 ಗಂಟೆ ನಡುವೆ ಕಪ್ಪು ಕಾರಿನಲ್ಲಿ ಮೂವರ ಯುವಕರ ಗುಂಪು ಬಂದಿದೆ. ರಾಮಾನುಜ ರಸ್ತೆಯ 12ನೇ ತಿರುವಿನ ಬಳಿ ರಸ್ತೆಯಲ್ಲಿ ಬರುತಿದ್ದ ಆಟೋಗೆ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದಾರೆ. ಆನಂತರ ಕಾರಿನಿಂದ ಇಳಿದ ಮೂವರು ವ್ಯಕ್ತಿಗಳು ಮಾರಾಕಾಸ್ತ್ರಗಳನ್ನು ಹಿಡಿದು ಆಟೋ ಒಳಗಿದ್ದ ಮಹಿಳೆಯರ ಮೇಲೆ ಮಚ್ಚುಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆಟೋದಲ್ಲಿದ್ದವರನ್ನು ಅವಾಚ್ಯವಾಗಿ ನಿಂದಿಸುತ್ತಾ, ನಿಮ್ಮನ್ನು ಕತ್ತರಿಸದೇ ಬಿಡುವುದಿಲ್ಲ ಎಂದು ಕೂಗುತ್ತಾ ಕಾರನ್ನು ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ.
ನೂರಾರು ಜನರು ಹಾಗೂ ವಾಹನಗಳು ಓಡಾಡುವ ರಾಮಾನುಜ ರಸ್ತೆಯಂತ ಪ್ರಮುಖ ಸ್ಥಳದಲ್ಲಿ ಈ ಘಟನೆ ನಡೆದಿರುವುದರಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಐವತ್ತಕ್ಕು ಹೆಚ್ಚು ಮಂದಿ ಸಾರ್ವಜನಿಕರು ಅಸಹಾಯಕರಾಗಿ ಘಟನೆಯನ್ನು ನೋಡುತ್ತಾ ನಿಂತಿದುದು ಕಂಡು ಬಂದಿದೆ. ಸಾರ್ವಜನಿಕರು ಕೆ.ಆರ್ ಪೊಲೀಸ್ ಠಾಣೆಯ ಅಧಿಕಾರಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಕೆ.ಆರ್ ಠಾಣಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಘಟನೆಗೆ ಕಾರಣರಾದವರ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ. ಆದರೆ ಯಾವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬುದು ಪೊಲಿಸರಿಗೆ ಗೊತ್ತಾಗಿಲ್ಲ. ಈ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಕೌಟುಂಬಿಕ ಕಲಹ,,,?
ಪೊಲೀಸರು ಹೇಳುವಂತೆ ಘಟನೆಯು ಕೌಟುಂಬಿಕ ಕಲಹವಾಗಿದೆ. ನಗರದ ಚಾಮರಾಜ ಮೊಹಲ್ಲಾ ನಿವಾಸಿ ಯುವತಿಯು ಕೆಲ ದಿನಗಳ ಹಿಂದೆ ತಾನು ಪ್ರೀತಿಸಿದ ಯುವಕನೊಂದಿಗೆ ಮನೆಬಿಟ್ಟು ತೆರಳಿದ್ದಳು ಎನ್ನಲಾಗಿದೆ. ಆಕೆ ಗುರುವಾದ ರಾತ್ರಿ ಆಟೋ ಮೂಲಕ ಬರುವ ವಿಚಾರ ತಿಳಿದ ಸಂಬಂದಿಗಳು ಕಾರಿನಲ್ಲಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





