ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಬಾಳೆ ತೋಟದಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯ ಕುಟುಂಬಸ್ಥರು ತೋಟದ ಮಾಲೀಕನೇ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ವಲ್ಪ ಭಾರ ಬಿದ್ದರೂ ಬಾಳೆ ಗಿಡ ಬಿದ್ದು ಹೋಗುತ್ತದೆ. ಅಂಥದ್ದರಲ್ಲಿ ಮಹಿಳೆಯೊಬ್ಬರು ಬಾಳೆ ಗಿಡಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ಯತ್ನ ನಡೆದಿದೆ.
ಗಟ್ಟವಾಡಿ ಗ್ರಾಮದ ಶಶಿಕಲಾ ಎಂಬುವವರೇ ಮೃತ ಮಹಿಳೆ ಆಗಿದ್ದಾರೆ. ಗಟ್ಟವಾಡಿ ಗ್ರಾಮದ ನಂಜುಂಡಪ್ಪ ಎಂಬುವವರ ಬಾಳೆ ತೋಟದಲ್ಲಿ ಶವ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕಬ್ಬಿಣದ ರಾಡು, ಕಾರಿನ ಮ್ಯಾಟ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.
ಮೃತ ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯ ಕೆಲಸ ಮುಗಿಸಿ ರಾತ್ರಿ ವೇಳೆಗೆ ಮನೆಗೆ ವಾಪಸ್ಸಾಗುತ್ತಿದ್ದರು. ಆದರೆ ಕಳೆದ ರಾತ್ರಿ ಮಹಿಳೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲಾ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಮಹಿಳೆಗೆ ಕರೆ ಮಾಡಿದ ಬಾಳೆ ತೋಟದ ಮಾಲೀಕ ನಂಜುಂಡಪ್ಪ ತನ್ನ ಬಾಳೆ ತೋಟದಲ್ಲಿ ಮಹಿಳೆ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದಾನೆ. ಗ್ರಾಮಸ್ಥರು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಮಾಲೀಕ ನಂಜುಂಡಪ್ಪ ಕಾಣೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರು ಬಾಳೆ ತೋಟದ ಮಾಲೀಕ ನಂಜುಂಡಪ್ಪ ವಿರುದ್ಧ ದೂರು ನೀಡಿದ್ದಾರೆ.
ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.