Mysore
28
few clouds

Social Media

ಶನಿವಾರ, 10 ಜನವರಿ 2026
Light
Dark

ಬಳ್ಳೂರುಹುಂಡಿಯಲ್ಲಿ ಕಾಡಾನೆಗಳ ಹಾವಳಿ : ಸಲಗಗಳ ಕಾಟಕ್ಕೆ ಬೇಸತ್ತ ಜನ

ನಂಜನಗೂಡು : ಇತ್ತೀಚಿನ ದಿನಗಳಲ್ಲಿ ನಂಜನಗೂಡಿನ ಕಾಡಂಚಿನ ಭಾಗಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಕಾಡಾನೆಗಳಿಂದ ತಮ್ಮ ಕೃಷಿ ಉಳಿಸುವ ಜೊತೆಗೆ ತಮ್ಮ ಪ್ರಾಣವನ್ನೂ ಉಳಿಸಿಕೊಳ್ಳಬೇಕಾಗಿ ಪರಿಸ್ಥಿತಿ ರೈತರಿಗೆ ಎದುರಾಗಿದೆ.

ತಾಲ್ಲೂಕಿನ ಬಳ್ಳೂರು ಹುಂಡಿಯ ಮುಖ್ಯರಸ್ತೆಯಲ್ಲಿ ಇಂದು ಬೆಳಗ್ಗೆ 8 ಗಂಟೆಯಲ್ಲಿ ಕಾಣಿಸಿಕೊಂಡ ಐದು ಆನೆಗಳು ರೈತರ ಜಮೀನುಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿವೆ.

ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಕಬ್ಬು, ಬಾಳೆ ಮತ್ತು ಇತರ ಬೆಳೆಗಳನ್ನು ನಾಶಪಡಿಸುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಬಳ್ಳೂರುಹುಂಡಿಯ ಬಸವರಾಜು ಮತ್ತು ಮರಿಸ್ವಾಮಿ ಅವರ ಜಮೀನಿನಲ್ಲಿ ಬಾಳೆ, ಕುಂಬಳಕಾಯಿ ಬೆಳೆಯನ್ನು ಹಾನಿ ಮಾಡಿ ಅಪಾರ ನಷ್ಟವನ್ನು ಉಂಟುಮಾಡಿದ್ದವು. ಇದರಿಂದ ರೈತರು ಕಂಗಾಲಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈನಡುವೆ, ಇಂದು ಅರಣ್ಯ ಸಿಬ್ಬಂದಿಗಳ ವಾಹನವನ್ನು ಅಡ್ಡಗಟ್ಟಿದ ಸಂತ್ರಸ್ಥ ರೈತ ಆನೆಗಳ ಹಾವಳಿ ತಪ್ಪಿಸುವಂತೆ ಗೋಳಾಡಿದ್ದಾರೆ. ರಾತ್ರಿಯ ವೇಳೆ ಕಾಡಂಚಿನಲ್ಲಿ ಗೇಟ್‌ಗಳು ಹಾಕದೆ ಇರುವುದರಿಂದಲೇ ಆನೆಗಳು ಗ್ರಾಮಕ್ಕೆ ಬರುತ್ತಿವೆ. ಈ ಬಗ್ಗೆ ಅರಣ್ಯ ಸಿಬ್ಬಂದಿಗಳಿಗೆ ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇಂದಿನ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ದೂಷಿಸಿದ್ದಾರೆ.
ಸದ್ಯ ಆನೆಗಳು ಜನರನ್ನು ಅಟ್ಟಾಡಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

Tags:
error: Content is protected !!