ಕಾದಿರುವಳು ಶಬರಿ..
ದಟ್ಟ ಕಾನನದ ಕಡು ಘೋರ ಕತ್ತಲಲೂ
ಪುಟ್ಟ ದೀಪವೊಂದನುರಿಸಿ ಕಾದಿರುವಳು ಶಬರಿ,
ಹಣ್ಣಾಗಿಹ ಮೈಮನಗಳ ಸಿಹಿ ಹಣ್ಣು ಹೆಕ್ಕಲೆಂದೇ ದಣಿಸಿ,
ಮೈಮನಗಳ ಕಣ್ಣಾಗಿಸಿ ಕಾದಿರುವಳು ಶಬರಿ.
ಶಬರಿ ಮಾತೆಯ ತಪ ಬರಿಯ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ರಾಮಾಯಣದ ಕಾಲಮಾನಕ್ಕೂ ವರ್ತಮಾನಕ್ಕೂ ಯುಗಯುಗಾಂತರದ ಅಂತರ. ಅದು ತ್ರೇತಾಯುಗ, ಇದು ಕಲಿಯುಗ. ಆದರೂ ಶಬರಿ ಮಾತೆಯ ತಪೋಬಲ, ಉಪಾಸನೆ ಬೆಟ್ಟದಷ್ಷು, ಅದಕ್ಕೇ ಇರಬೇಕು ಸ್ವಾಮಿ ಅಯ್ಯಪ್ಪ ನೆಲೆಸಿರುವ ಕ್ಷೇತ್ರದ ಹೆಸರೇ ಶಬರಿ ಬೆಟ್ಟ ಅಥವಾ ಶಬರಿಮಲೆ!
ಭವ್ಯ ಭಾರತ ತನ್ನ ಮರ್ಯಾದಾಪುರುಷೋತ್ತಮನ್ನು ಅಯೋಧ್ಯೆಯಲ್ಲಿ ಪ್ರತಿಷ್ಟಾಪಿಸಲು ಸಿದ್ಧವಾಗುತ್ತಿರುವಂತೆಯೇ ರಾಮಾಯಣ ಮತ್ತು ಮಹಾಭಾರತಗಳು ಎಂದಿಗಿಂತ ಇಂದು ಪ್ರಸ್ತುತವೆನಿಸುತ್ತದೆ. ಶಬರಿ ಕಾಯುವಿಕೆಯಲ್ಲಿ ಕಲಿಯುವಿಕೆ ಬಹಳಷ್ಟಿದೆ. ನಿತ್ಯ ಶ್ರೀರಾಮನ ಆಗಮನದ ಆಕಾಂಕ್ಷೆಯಲಿ, ಅವನ ಸತ್ಕರಿಸಿ ಉಪಚರಿಸಲಿಕ್ಕಾಗಿ ಪ್ರತಿ ದಿನ ಹಣ್ಣುಗಳನ್ನು ಆರಿಸಿ ಆಯ್ದು ಕಾದಿರುತ್ತಿದ್ದಳು. ಇದು ಶಬರಿ ಮಾತೆಯ ನಿತ್ಯ ಕಾಯಕ.
ಆಯ್ದ ಹಣ್ಣುಗಳಲ್ಲಿ ಕಹಿಯಾಗಿದ್ದವು ಎಷ್ಟೋ? ಒಗಚು ಒಗರು ಎಷ್ಟೋ? ಹುಳಿಯಾಗಿದ್ದವದೆಷ್ಟೋ? ಇದೆಲ್ಲದರ ನಡುವೆ ಆರಿಸಿ ಆರಿಸಿ ಶ್ರೀರಾಮನಿಗಾಗಿ ಅತ್ಯುತ್ತಮವಾದ ಹಣ್ಣುಗಳನ್ನು ಬೇರ್ಪಡಿಸುವ ಸಂಭ್ರಮ. ಒಂದು ಸಿಹಿ ಹಣ್ಣು ಕಚ್ಚುವ ಮೊದಲ ಎರಡು ಹುಳಿಯಿದ್ದಿರಬಹುದು, ಹತ್ತು ಕಾರ್ಕೋಟಕ ಕಹಿ, ಒಂದೆರಡು ಒಗಚು. ಇವಿಷ್ಟರಲ್ಲೇ ಶಬರಿಯ ನಾಲಿಗೆ ಜಡ್ಡು ಹಿಡಿದಿರಬಹುದು. ಆದರೂ ಅನುದಿನದ ಪ್ರಯತ್ನ. ಕಹಿ, ಹುಳಿ, ಒಗಚೆಲ್ಲಾ ಹೊರಗೆ, ಸಿಹಿ ಸಿಹಿಯಾದ ಹಣ್ಣುಗಳು ಮಾತ್ರ ಶ್ರೀರಾಮನಿಗೆ.
ನಮ್ಮ ನಿಮ್ಮ ಬದುಕಿನ ಅನುಭವವೂ ಇದೇ ತಾನೇ, ಎಂದಾದರೊಂದು ದಿನ ಶ್ರೀರಾಮ ದರ್ಶನ ಭಾಗ್ಯ ದೊರೆಕೀತೆಂಬ ಶಬರಿ ಆಕಾಂಕ್ಷೆಯವರೇ ತಾನೇ! ನಮ್ಮ ಜೀವನದ ಅನುಭವಗಳನ್ನು ನೋಡಿದಾಗ, ಅವೂ ಕೂಡ ಈ ಶಬರಿ ಆರಿಸಿಟ್ಟ ಹಣ್ಣುಗಳಂತೆಯೇ. ಕೆಲವು ಕಹಿ, ಹಲವು ಹುಳಿ, ಅಲ್ಲೊಂದು ಇಲ್ಲೊಂದು ಸಿಹಿ. ಆದರೆ ನಾವು, ಸಿಹಿಯನ್ನು ಮರೆತು ಬರೀ ಕಹಿ ಹುಳಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬದುಕಿಗೇ ಹುಳಿ ಹಿಂಡಿಕೊಳ್ಳುತ್ತೀವಿ. ಶಬರಿ ಹಾಗೇ ನಾವೂ ಕಹಿ ಹುಳಿ ಹೊರಗೆಸೆದು ಸಿಹಿಯಾದದ್ದನ್ನೆಲ್ಲಾ ಶ್ರೀರಾಮನಿಗೆ ನೈವೇದ್ಯ ಮಾಡಿದರಾಗದೇ?
ಹೃದಯ ಹೂದೋಟವಾಗಿರಲಿ,
ದುರ್ವಾಸನೆಯ ಗೊಬ್ಬರದಲರಳಿ
ಸುವಾಸನೆಯ ಸುತ್ತ ಪಸರಿಸುವಂತೆ
ಹೃದಯ ಹೂದೋಟವಾಗಿರಲಿ.
– ಅನಿರುದ್ಧಪದ್ಮನಾಭ, ಮೈಸೂರು