Mysore
20
overcast clouds
Light
Dark

ಕಳೆಗಟ್ಟಿದ ದಸರಾ ಸಂಭ್ರಮ : ಅರಮನೆಗೆ ಆಗಮಿಸಿದ ಗಜಪಡೆ

ಮೈಸೂರು : ಮೈಸೂರಿನಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಕಳೆಕಟ್ಟಿದ್ದು, ಇಂದು ಕಾಡಿನಿಂದ ನಾಡಿಗೆ ಬಂದ ದಸರಾ ಗಜಪಡೆಯ ಎಲ್ಲಾ ಆನೆಗಳಿಗೂ ಸಾಂಪ್ರದಾಯಿಕ ಆದ್ದೂರಿ ಸ್ವಾಗತ ಕೋರಲಾಯಿತು.

ಅರಮನೆ ನಗರಿಯಲ್ಲಿ ಈಗಾಗಲೇ ದಸರಾ ಮೆರಗು ಜೋರಾಗುತ್ತಿದ್ದು, ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆ ನಗರದ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದವು, ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ಬೀಳ್ಕೊಡಲಾಯಿತು.

ಅರಮನೆ ಆಡಳಿತಮಂಡಳಿ ವತಿಯಿಂದ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಾಧ್ಯಾಹ್ನ 12.01 ರಿಂದ 12.51 ರ ಅಭಿಜಿನ್ ಲಗ್ನದಲ್ಲಿ ದಸರಾ ಗಜಪಡೆಗಳಿಗೆ ಅರಮನೆ ಆಡಳಿತ ಮಂಡಳಿ ವತಿಯಿಂದ ಪೂಜೆ ನೆರವೇರಿಸಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ಅವರಿಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ಮಾಡಲಾಯಿತು. ಬಳಿಕ ಅರಮನೆಯ ಗೊಂಬೆ ತೊಟ್ಟಿಯಲ್ಲಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿದರು.

ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಸಿಂಗರಿಸಿದ್ದ ಅನೆಗಳಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿ, ಬೀಳ್ಕೊಟ್ಟರು. ಅಂಬಾರಿ ಹೊರುವ ಅಭಿಮನ್ಯು ಮುಂದಾಳತ್ವದಲ್ಲಿ ಎಲ್ಲಾ ಆನೆಗಳು ಮೈಸೂರಿನ ಅರಣ್ಯಭವನದಿಂದ ಅರಮನೆಯತ್ತ ಹೆಜ್ಜೆ ಹಾಕಿದವು. ಅರಣ್ಯ ಭವನದಿಂದ ಹೊರಟ ಎಲ್ಲಾ ಆನೆಗಳು ನಗರದ ಪ್ರಮುಖ ರಸ್ತೆಯಲ್ಲಿ ರಾಜಗಾಂಭೀರ್ಯದಿಂದ ಸಾಗಿದವು. ಈ ವೇಳೆ ನೂರಾರು ಮಂದಿ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅರಮನೆಯತ್ತ ಸಾಗುತ್ತಿದ್ದ ಆನೆಗಳನ್ನು ನೋಡಿ ಕಣ್ತುಂಬಿಕೊಂಡರು.

ಅರಮನೆ ಅಂಗಳ ಪ್ರವೇಶಿಸಿದ ದಸರಾ ಗಜಪಡೆಯ ಆನೆಗಳಿಗೆ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಅರಮನೆಗೆ ಆಗಮಿಸಿದ ಗಜಪಡೆಯ ಆನೆಗಳಿಗೆ ಕಾಲು ತೊಳೆದು ಪಾದ ಪೂಜೆ ಸಲ್ಲಿಸಲಾಯಿತು. ಈ ವೇಳೆ ಗಜಪಡೆಗೆ ಪ್ರಿಯವಾದ ಬೆಲ್ಲ, ಅಕ್ಕಿ, ಬಾಳೆಹಣ್ಣು, ಜೋಳ, ಕಬ್ಬು ಇತ್ಯಾದಿ ಹಣ್ಣುಗಳನ್ನು ನೀಡುವ ಮೂಲಕ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಜಿ.ಟಿ ದೇವೇಗೌಡ, ಜಿ.ಡಿ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಕೆ ಹರೀಶ್ ಗೌಡ,ಡಾ.ಡಿ ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ ರೂಪ, ವಾರ್ಡ್ ನಂ 51 ರ ಮಹಾನಗರ ಪಾಲಿಕೆಯ ಸದಸ್ಯರಾದ ಬಿ.ವಿ ಮಂಜುನಾಥ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ