ಮೈಸೂರು : ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಒಂದಾದರೂ ಅಧಿಕಾರಕ್ಕೆ ಬರಲ್ಲವೆಂದು ಭವಿಷ್ಯ ನುಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ನಡೆದ ಜಾ.ದಳ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣರನ್ನು ದ್ವೇಷದ ರಾಜಕಾರಣಕ್ಕಾಗಿ ಬಂಧಿಸಲಾಗಿದೆ. ನಮಗೂ ಟೈಮ್ ಬರುತ್ತದೆ. ಸಮಯ ಬಂದಾಗ ನಾವು ತೀರಿಸಿಕೊಳ್ಳುತ್ತೇವೆ ಎನ್ನುವ ಮಾತನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಕಲ್ಪ ಮಾಡಿರುವ ಕುರಿತ ಪ್ರಶ್ನೆಗೆ, ಕಾನೂನು ಪ್ರಕಾರ ಪೊಲೀಸ್‌ನವರು ಮಾಡಿರುತ್ತಾರೆ. ಅವರ ಕಾಲದಲ್ಲಿ ಕಾನೂನು ಪ್ರಕಾರ ಮಾಡಲಿ. ಅಧಿಕಾರಕ್ಕೆ ಬರಲ್ಲ.ಒಂದು ವೇಳೆ ಅಧಿಕಾರಕ್ಕೆ ಬಂದರೆ ಕಾನೂನು ಪ್ರಕಾರ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ತಿರುಗೇಟು ನೀಡಿದರು.
2004ರಲ್ಲಿ ನಾನು ಜಾ.ದಳದ ಅಧ್ಯಕ್ಷನಾಗಿದ್ದಾಗ 59 ಸ್ಥಾನಗಳನ್ನು ಮಾತ್ರ ಗೆದ್ದಿದ್ದೇವು. ಈಗ 17 ಸ್ಥಾನಗಳನ್ನು ಗೆದ್ದಿದೆ. ಹೀಗಿರುವಾಗ ಹೇಗೆ ಜಾ.ದಳ ಅಧಿಕಾರಕ್ಕೆ ಬರುತ್ತದೆ. ರಾಜಕೀಯವಾಗಿ ಬಾಯಲ್ಲಿ ಭಾಷಣ ಮಾಡುವುದು ಬೇರೆ. ಹದಿನೇಳು ಸ್ಥಾನಗಳನ್ನು ಗೆದ್ದಿರುವ ಅವರು ಈಗ ಯಾವ ರೀತಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿ-ಜಾ.ದಳ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದರೂ ನಾವು 2023ರಲ್ಲಿ 136 ಸ್ಥಾನಗಳನ್ನು ಗೆದ್ದಿದ್ದೇವೆ. ಮುಂದೆಯೂ ಹೊಂದಾಣಿಕೆ ಮಾಡಿಕೊಂಡರೂ ಕೂಡ ಅಧಿಕಾರಕ್ಕೆ ಬರಲ್ಲ. ಬರದೂ ಇಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಹಾಸನ ಜಿಲ್ಲೆಯ ಪ್ರಕರಣದಲ್ಲಿ ಪೊಲೀಸರು ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಪೊಲೀಸರಿಗೆ ಗಿಫ್ಟ್ ನೀಡಿಲ್ಲ. ಸುಮ್ಮನೇ ರಾಜಕಾರಣಕ್ಕಾಗಿ ಮಾತನಾಡಿದರೆ ಒಪ್ಪಲಾಗದು. ಎಚ್.ಡಿ.ರೇವಣ್ಣ ಪ್ರಕರಣವಲ್ಲ, ಯಾವುದೇ ಪ್ರಕರಣಗಳಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ, ಮಾಡುವುದು ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮತ್ತಿತರರು ಹಾಜರಿದ್ದರು.




