Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರು ನಗರವನ್ನು ಶೀಘ್ರವೇ ಪ್ಲಾಸ್ಟಿಕ್ ಮುಕ್ತಗೊಳಿಸುವ ಸಂಕಲ್ಪ ಕೈಗೊಂಡಿದ್ದೇವೆ : ಈಶ್ವರ್ ಖಂಡ್ರೆ

ಮೈಸೂರು : ಮೈಸೂರು ನಗರ ಸೇರಿದಂತೆ ರಾಜ್ಯದ ಐದು ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವುದಾಗಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಮೈಸೂರಿನ ಸುತ್ತೂರು ಶಾಖಾಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಅಷ್ಟೇ ಅಲ್ಲ ವಿಶ್ವಾದ್ಯಂತ ಪ್ಲಾಸ್ಟಿಕ್ ಅತಿ ದೊಡ್ಡ ಸಮಸ್ಯೆಯಾಗಿದೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ನೂರಾರು ಸಮಸ್ಯೆಗಳು ತಲೆ ದೋರುತ್ತಿವೆ, ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡುವ ಸಂಕಲ್ಪವನ್ನು ಸರ್ಕಾರ ಕೈಗೊಂಡಿದೆ ಎಂದರು.

ವಿಶ್ವ ಪರಿಸರ ದಿನದಂದು 5 ನಗರಗಳನ್ನ ಏಕಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಮಾಡಿದ್ದು ಅದರಂತೆ ಕಲ್ಬುರ್ಗಿ ಬೀದರ್, ಮೈಸೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಮೊದಲ ಹಂತದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡುವುದಾಗಿ ಸಚಿವರು ತಿಳಿಸಿದರು.

ಬಂಡಿಪುರ ಅರಣ್ಯ ವಿಭಾಗದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಎಂಬುವರು ಭ್ರಷ್ಟಾಚಾರ ಎಸೆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಶಾಸಕ ಗಣೇಶ್ ಪ್ರಸಾದ್ ಅವರ ದೂರಿನ ಅನ್ವಯ ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು ವರದಿ ಬಂದ ನಂತರ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಮ್ಮ ಇಲಾಖೆಯಲ್ಲಿ ಭ್ರಷ್ಟ ಮುಕ್ತ ಪಾರದರ್ಶಕ ಆಡಳಿತ ನೀಡಲು ಸಂಕಲ್ಪ ಮಾಡಿದ್ದು ಈಗಾಗಲೇ ಭ್ರಷ್ಟಾಚಾರ ಆರೋಪದ ಮೇಲೆ ಇಬ್ಬರು ಡಿ.ಸಿ.ಎಫ್ ಗಳನ್ನು ಅಮಾನತು ಮಾಡಲಾಗಿದೆ. ಈ ರೀತಿ ಪ್ರಕರಣಗಳು ಎಲ್ಲೇ ವರದಿಯಾದರೂ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಾನವ ಮತ್ತು ವನ್ಯಜೀವಿಗಳ ಸಂಘರ್ಷದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯ ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ ಪ್ರತಿಯೊಬ್ಬ ಮನುಷ್ಯನ ಜೀವವೂ ಅತ್ಯಮೂಲ್ಯ, ವನ್ಯಜೀವಿಗಳಿಂದ ಮಾನವ ಪ್ರಾಣ ಹಾನಿ ಆಗದಂತೆ ಕ್ರಮವಹಿಸಲು ಇಲಾಖೆಗೆ ಸೂಚಿಸಲಾಗಿದೆ ಆನೆಗಳ ಹಾವಳಿ ಇರುವ ಕಡೆ ಆನೆಗಳನ್ನು ತಕ್ಷಣವೇ ಕಾಡಿಗೆ ಅಟ್ಟಲು ಎರಡು ಹೊಸ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದರು.

ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ ಆನೆಗಳು ನಾಡಿಗೆ ಬಾರದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್ ನಲ್ಲಿ ಇದಕ್ಕೆ 120 ಕೋಟಿ ರೂ ಹಂಚಿಕೆ ಮಾಡಿದ್ದಾರೆ ಎಂದು ತಿಳಿಸಿದರು.

ತಾವು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸುತ್ತೂರು ಶ್ರೀಗಳ ದರ್ಶನ ಮಾಡಲು ಬಂದಿದ್ದು ಅವರ ಆಶೀರ್ವಾದ ಪಡೆದುದಾಗಿ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!