ಮೈಸೂರು: ಕಲುಷಿತ ನೀರು ಸೇವಿಸಿ ಸಾಲುಂಡಿ ಗ್ರಾಮದ ಯುವಕನೋರ್ವ ಮೃತನಾದ ಘಟನೆಗೆ ಸಂಬಂಧಿಸಿದಂತೆ ಮೂಡಾ ಇಂಜಿನಿಯರ್ ನ್ನು ಅಮಾನತು ಮಾಡುವಂತೆ ಶಾಸಕ ಜಿಟಿ ದೇವೇಗೌಡ ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತರಿಗೆ ನೇರವಾಗಿ ಕರೆ ಮಾಡಿದ ಶಾಸಕ ಜಿಟಿಡಿ, ಮುಡಾ ಇಂಜಿನಿಯರ್ ಕೆ.ಟಿ ರವಿ ಅವರನ್ನು ಅಮಾನತು ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ ಮೂರು ವರ್ಷಗಳಿಂದ ನಾನು ಹೇಳುತ್ತಲೇ ಇದ್ದೇನೆ. ಸಮರ್ಪಕ ಕುಡಿಯುವ ನೀರಿನ ಪೂರೈಕೆಯಿಲ್ಲ. ಕುಡಿಯುವ ನೀರಿಗೆ ಟ್ಯಾಂಕ್ ಮಾಡಿಲ್ಲ. ಸರ್ಕಾರ ಸೆಪ್ಟಿಕ್ ಟ್ಯಾಂಕ್ ಮಾಡಿದೆ. ಅದಕ್ಕೆ ಪೈಪ್ ಲೈನ್ ಲಿಂಗ್ ಮಾಡಿಲ್ಲ ಎಂದು, ಆದರೆ ರಿಯಲ್ ಎಸ್ಟೇಟ್ ಮಾಡಿಕೊಂಡು ಸೈಟ್ ಮಾರುತ್ತಿದ್ದಾನೆ. ಕೆ.ಟಿ ರವಿ ಅವರನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಈ ದುರಂತಕ್ಕೆ ಮೂಡಾ ಅಧಿಕಾರಿಗಳೇ ನೇರ ಕಾರಣ. ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮೃತಪಟ್ಟರೇ, 48 ಜನರು ಅಸ್ವಸ್ಥರಾಗಿದ್ದಾರೆ. ದೇವರ ದಯೆಯಿಂದ ದೊಡ್ಡ ಅನಾಹುತವಾಗಿಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸಾಲುಂಡಿ ಗ್ರಾಮದಲ್ಲಿ ಮೊದಲು ಕುಡಿಯುವ ನೀರಿಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ದುರಸ್ಥಿ ಕಾರ್ಯ ಮೊದಲು ಆಗಬೇಕು. ಈ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಬರುವ ಸಂಭವವಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದು ಜಿಟಿ ದೇವೇಗೌಡ ಆಕ್ರೋಶ ಹೊರಹಾಕಿದ್ದಾರೆ.





