ಮೈಸೂರು: ಮತಗಳ್ಳತನ ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಗೆದ್ದ ಕಡೆಯಲ್ಲೆಲ್ಲಾ ಮತಗಳ್ಳತನ ಆಗಿಲ್ವಾ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತು ಕಂಗೆಟ್ಟಿರುವ ಕಾಂಗ್ರೆಸ್ ತರಾವರಿ ಆರೋಪ ಮಾಡುತ್ತಿದ್ದು, ಇವಿಎಂ ಹಠಾವೋ ಚಳವಳಿಯನ್ನು ಕಾಂಗ್ರೆಸ್ ಶುರು ಮಾಡಿದೆ. ಆದರೆ, ರಾಹುಲ್ ಗಾಂಧಿ ಮಾಡುವ ಆರೋಪಕ್ಕೆ ಸಾಕ್ಷಿ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ಎನ್ನುವುದು ಕಾಂಗ್ರೆಸ್‌ಗೆ ಜನ್ಮತಃ ಬಂದಿದೆ. ಚನ್ನಪಟ್ಟಣ, ಸಂಡೂರು, ರಾಮನಗರ ಉಪ ಚುನಾವಣೆಗಳಲ್ಲಿ ಗೆದ್ದಾಗ ಅದು ನ್ಯಾಯ ಸಮ್ಮತವಾಗಿತ್ತೆ?, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಹುಲ್ ಗಾಂಧಿ ರೀತಿ ಮಾತನಾಡಿದರೆ ಏನೂ ಹೇಳಬೇಕೋ ಕಾಣೆ ಎಂದರು.
ಜನಕ್ಕಿಂತ ಜಾಸ್ತಿ ಮತದಾರರು ಇದ್ದಾರೆ ಎಂದು ಹೇಳುವ ರಾಹುಲ್ ಗಾಂಧಿಯ ಆರೋಪಕ್ಕೆ ಸಾಕ್ಷಿಯೆ ಇಲ್ಲ. ವಿಧಾನಸಭೆಗೆ ಒಂದು ರೀತಿ ಮತ ಹಾಕುತ್ತಾರೆ. ಲೋಕಸಭೆಗೆ ಒಂದು ರೀತಿ ಮತ ಹಾಕುತ್ತಾರೆ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸತ್ತವರು ಬಂದು ನನಗೆ ಮತ ಹಾಕಿದ್ದಾರೆ ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಚಾಮುಂಡೇಶ್ವರಿ ಉಪ ಚುನಾವಣೆಗೆ ಪೀಟರ್ ಎಂಬ ಚುನಾವಣಾ ವೀಕ್ಷಕನನ್ನು ಹಾಕಿಸಿ ಕೊಂಡು ನೀವು ಹೇಗೆ ಗೆದ್ದಿರಿ ಎಂಬುದು ಗೊತ್ತಿದೆ ಎಂದ ಅವರು, ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿ.ನರಸೀಪುರದಲ್ಲಿ ಘೋಷಿತ ಫಲಿತಾಂಶ ಉಲ್ಟಾ ಮಾಡಿ ಗೆದ್ದರು ಎಂದು ಕಿಡಿಕಾರಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ತನ್ನ ಕ್ಷೇತ್ರದ ಬಗ್ಗೆ ಮಾತಾಡಲಿ, ಪ್ರಿಯಾಂಕ್ ಖರ್ಗೆ ಅಂತೂ ಕಾಲೇಜು ಓದಲಿಲ್ಲ. ತಮ್ಮ ಕ್ಷೇತ್ರದ ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಕಾಲೇಜು ಕಟ್ಟಿಸಲಿ ಎಂದು ಹೇಳಿದರು.





