ಮೈಸೂರು : ಮತದಾನ ಮಾಡುವುದು ಭಾರತೀಯ ಪ್ರಜೆಗಳಾದ ನಮ್ಮ ಹಕ್ಕು ಮತ್ತು ಕರ್ತವ್ಯ ಆದ್ದರಿಂದ ಇದೇ ಏಪ್ರಿಲ್ 26ರ ಮತದಾನದ ದಿನ ತಪ್ಪದೇ ಮತದಾನ ಮಾಡುವಂತೆ ಸಾರ್ವಜನಿಕರಿಗೆ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್ ಎಸ್.ಪಿ ಅವರು ತಿಳಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ -2024ರ ಹಿನ್ನೆಲೆ ಗುರುವಾರ ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದ ವೃತದಲ್ಲಿ ಸಾರ್ವಜನಿಕರಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಭಾರತ ಸಂವಿಧಾನದಲ್ಲಿ ಮತದಾನ ಮಾಡುವ ಹಕ್ಕನ್ನು 18 ವರ್ಷ ತುಂಬಿದ ಎಲ್ಲರಿಗೂ ಅವಕಾಶ ಕಲ್ಪಸಲಾಗಿದೆ. ಈ ಹಕ್ಕನ್ನು ಚಲಾಯಿಸುವ ಮೂಲಕ ಉತ್ತಮ ನಾಯಕರನ್ನು ನೀವೇ ಆಯ್ಕೆ ಮಾಡಿಕೊಳ್ಳುವ ಅಧಿಕಾರ ನಿಮ್ಮ ಕೈಯಲ್ಲಿದೆ. ಹಕ್ಕನ್ನು ಚಾಚು ತಪ್ಪದೇ ಪಾಲಿಸಿ ಎಂದು ಹೇಳಿದರು.
ಮತದಾನದಿಂದ ಯಾರು ದೂರ ಉಳಿಯಬಾರದು, ನಿಮ್ಮ ನೆರೆಹೊರೆಯ ವರಿಗೂ ತಿಳಿಸಿ, ‘ಮತದಾರರ ನಡೆ ಮತಗಟ್ಟೆಯ ಕಡೆ’
ಇರಬೇಕು ಆಗ ಮಾತ್ರ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಧ್ಯ ಎಂದು ಹೇಳಿದರು.
ಡಿ.ಬಿ.ಕುಪ್ಪೆ, ಹೊಸೂರು, ಬಾವಲಿ ಹಾಗೂ ಆನೆ ಮಾಳದ ಹಾಡಿಗಳಿಗೆ ತೆರಳಿ ಚುನಾವಣಾ ಪೋಸ್ಟರ್ ಅಂಟಿಸಿ, ಮತದಾನ ಪ್ರತಿಜ್ಞಾವಿಧಿ ಬೋಧಿಸಿ ಯಾವುದೇ ಆಸೆ – ಆಮಿಷಗಳಿಗೆ ಮರಳಾದೆ ವಿವೇಚನೆಯಿಂದ ಮತದಾನ ಮಾಡುವಂತೆ ಜನರಿಗೆ ಅರಿವು ಮೂಡಿಸಲಾಯಿತು.
ಈ ವೇಳೆ ತಹಶೀಲ್ದಾರ್ ಶ್ರೀನಿವಾಸ್, ಸಹಾಯಕ ನಿರ್ದೇಶಕರು (ಗ್ರಾ.ಉ) ರಘುನಾಥ್ ಕೆ.ಎಂ, ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ ಕೆ, ಪಿಡಿಒ ದೇವರಾಜು ಎಂ.ಕೆ, ಐಇಸಿ ಸಂಯೋಜಕ ನಿಂಗರಾಜು ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.
ಪೋಟೋ ಶೀರ್ಷಿಕೆ: ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಮಾಳ ಹಾಡಿಯಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್ ಎಸ್.ಪಿ ಅವರು ಹಾಡಿ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿದರು