ಮೈಸೂರು: ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಶಾಸಕ ಹರೀಶ್ ಗೌಡ ವಿಶ್ವಾಸದಿಂದ ಹೇಳಿದ್ದಾರೆ.
ನಗರದ ವಾರ್ಡ್ ನಂಬರ್ 23ರ ವ್ಯಾಪ್ತಿಯ ಕೊಲ್ಲಾಪುರದಮ್ಮ ದೇವಸ್ಥಾನದ ಹಿಂಭಾಗ ಅಂದಾಜು 3.5 ಲಕ್ಷ ವೆಚ್ಚದ ಕೊಳವೆಬಾವಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.
ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಚತುರತೆಯಿಂದ ನಮಗೆ ಗೆಲುವು ಖಚಿತವಾಗಲಿದೆ. ಜೊತೆಗೆ ಜನತೆ ಕಾಂಗ್ರೆಸ್ ಪಕ್ಷದ ಪರ ಇದ್ದಾರೆ ಎಂದು ಹೇಳಿದರು.
ವಾರ್ಡ್ 23 ರ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ ಹಾಗಾಗಿ ಬೋರ್ ವೆಲ್ ಕನೆಕ್ಷನ್ ಕೊಡುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಈ ವೇಳೆ ಹರೀಶ್ ಗೌಡ ಭರವಸೆ ನೀಡಿದರು.
ಟ್ಯಾಂಕ್ ನಿರ್ಮಾಣದ ಕೆಲಸ ಶೇ.70 ರಷ್ಟು ಮುಗಿದಿದೆ. ರಮಾವಿಲಾಸ್ ರಸ್ತೆ, ಬಂಡಿಕೇರಿ, ಮರಿಮಲ್ಲಪ್ಪ ಶಾಲೆ ಹಿಂಬಾಗ ಮತ್ತು ಮುಂಭಾಗ ಹೀಗೆ ಈ ಭಾಗದ ಎಲ್ಲಾ ಕಡೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ, ಇನ್ನು ಒಂದು ತಿಂಗಳೊಳಗೆ ಕಾಮಗಾರಿ ಮುಗಿದು ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ನಾಗಭೂಷಣ, ಕಾಂಗ್ರೆಸ್ ಮುಖಂಡರುಗಳಾದ ರಾಜೀವ, ಮಹದೇವ, ಆನಂದ, ರವಿಚಂದ್ರ, ಮಂಜುನಾಥ, ಶಾಂತ ,ಮಂಗಳ, ಸಂಜಯ, ಲೋಕೇಶ, ಮುಸ್ತಾಫ , ಯುಜಿಡಿ ವಾಟರ್ ಸಪ್ಲೈ ಅಧಿಕಾರಿ ಜಗದೀಶ್ ಆರ್, ವಾಟರ್ ಇನ್ಸ್ಪೆಕ್ಟರ್ ಮಹದೇವ್ ಹಾಗೂ ಅನೇಕ ಮುಖಂಡರು ಹಾಜರಿದ್ದರು.





