ತಿ.ನರಸೀಪುರ : ವಿಬಿ ಜಿ ರಾಮ್ ಜಿ ಕಾಯ್ದೆ ರದ್ದಾಗಿ ಮನ್ರೇಗಾ ಮತ್ತೆ ಜಾರಿಯಾಗುವವರೆಗೆ ನಡೆಸುವ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ತಿ. ನರಸೀಪುರ ತಾಲ್ಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ನಡೆಸುವ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಈ ಕಾನೂನು ಜಾರಿ ಮಾಡಿದರು. ಕೆಲಸದ ಹಕ್ಕು ಕೊಟ್ಟರು. ಅದನ್ನು ಕಿತ್ತುಹಾಕುತ್ತಿದ್ದಾರೆ. ಬಿಜೆಪಿಯವರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ. ನೀವು ಯಾವಾಗ ಕೇಳಿದರೂ ಉದ್ಯೋಗ ಕೊಡುವ ಕಾಯಿದೆಯನ್ನು ಜಾರಿ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಅದನ್ನು ತೀರ್ಮಾನಿಸಲಿದೆ. ವಿಬಿಜಿ ಗ್ರಾಮ್ ಜಿ ರದ್ದಾಗಬೇಕು. ಜನರನ್ನು ತಪ್ಪು ದಾರಿ ಎಳೆಯಲು ರಾಮ್ ಜಿ ಸೇರಿಸಿದ್ದಾರೆ. ಎಲ್ಲರೂ ಚಳುವಳಿಗೆ ತಯಾರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಮನ್ರೇಗಾ ಯೋಜನೆಯನ್ನು ಮುಂದುವರೆಸಲು ಹೋರಾಟ
ಕೇಂದ್ರ ಸರ್ಕಾರ ಇತೀಚೆಗೆ ಮನ್ರೇಗಾ ಬದಲಿಗೆ ವಿಬಿಜಿ ಗ್ರಾಮ್ ಜಿ ಎಂಬ ಕಾಯ್ದೆ ಜಾರಿಗೆ ತಂದಿದ್ದಾರೆ. ಇನ್ನು ಮುಂದೆ ನರೇಗಾ ಯೋಜನೆ ಇರುವುದಿಲ್ಲ. ನಮ್ಮ ಸರ್ಕಾರ ಮನ್ರೇಗಾ ಯೋಜನೆಯನ್ನು ಮುಂದುವರೆಸಲು ಹೋರಾಡುತ್ತಿದೆ. ದಲಿತರಿಗೆ, ಹೆಣ್ಣುಮಕ್ಕಳಿಗೆ ಮೂರು ದಿನ ಕೆಲಸ ಕೊಡುವ ಕಾಯ್ದೆ.ಅದು ಸಂವಿಧಾನದ ಹಕ್ಕು. ಅದನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದೆಂಬ ಒತ್ತಡವನ್ನು ಹಾಕಲಾಗುತ್ತಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಸುಮಾರು 10,000ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳು
ವಿರೋಧ ಪಕ್ಷದವರು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಎರಡುವರೆ ವರ್ಷಗಳಲ್ಲಿ 1932 ಕೋಟಿ ಗಳನ್ನು ಕೇವಲ ಅಭಿವೃದ್ಧಿಗಾಗಿಯೇ ವೆಚ್ಚ ಮಾಡಲಾಗಿದೆ. ಖಜಾನೆ ಖಾಲಿಯಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮೈಸೂರು ಜಿಲ್ಲೆಯಲ್ಲಿ ಸುಮಾರು 10.000 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಂಡಿದೆ. 1,15,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೈಸೂರಿಗೆ ಬಂದಾಗಲೆಲ್ಲಾ ಜನರನ್ನು ಭೇಟಿ ಮಾಡುವ ಪ್ರಯತ್ನ
ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರುಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ. ಯತೀಂದ್ರ ಎಂದರು. ಅವರಿಗೆ ಕ್ಷೇತ್ರದ ಎಲ್ಲಾ ಗ್ರಾಮಗಳ ಪರಿಚಯವಿದೆ. ವಾರಕ್ಕೆ ಎರಡು ಮೂರು ಸಾರಿ ಬಂದು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಮೈಸೂರಿಗೆ ಬಂದಾಗಲೆಲ್ಲಾ ಜನರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ. ನನ್ನ ಉಸಿರಿವವರೆವಿಗೂ ಜನರ ಸೇವೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಡಾ: ಎಂ.ಸಿ.ಸುಧಾಕರ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರು ಹಾಗೂ ರಾಜ್ಯ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಮೇಲ್ಮನೆ ಸದಸ್ಯರಾದ ಡಾ: ತಿಮ್ಮಯ್ಯ, ಶಾಸಕ ರವಿಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.




