Mysore
19
few clouds
Light
Dark

ವಾಲ್ಮೀಕಿ ಹಗರಣವನ್ನು ಮುಚ್ಚಿಹಾಕಲು ಸಿದ್ದು, ಡಿಕೆಶಿಯಿಂದ ರಾಜಕೀಯ ನಾಟಕ; ಸಿ.ಟಿ.ರವಿ ಗಂಭೀರ ಆರೋಪ

ಮೈಸೂರು: ವಾಲ್ಮೀಕಿ ನಿಗಮ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದನ್ನು ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ರಾಜಕೀಯ ನಾಟಕ ಆಡುತ್ತಿದ್ದಾರೆ ಎಂದು ಪರಿಷತ್‌ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.

ಮೈಸೂರು ಮುಡಾದಲ್ಲಿ ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ಸಿಎಂ ಮೂಗಿನಡಿ ಸಾವಿರಾರು ಕೋಟಿ ಬೆಲೆ ಬಾಳುವ ಮುಡಾ ಆಸ್ತಿ ಕಳ್ಳರ ಪಾಲಾಗಿದೆ. 69ನೇ ಇಸವಿಯಲ್ಲಿ ಭೂಮಿ ಕಳೆದುಕೊಂಡವರು ಇವತ್ತಿಗೆ ಜ್ಞಾನೋದಯವಾಗಿ ಅರ್ಜಿ ಕೊಟ್ಟಿದ್ದಾರಂತೆ. ಮುಡಾದವರು ಲಕ್ಷ ಲಕ್ಷ ಅಡಿಯನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿಗೆ ಹೋಗಿದೆ ಎಂಬುದರ ಬಗ್ಗೆ ಬಿಜೆಪಿ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆಯಾಗಬೇಕು. ಯಾರೇ ಈ ಪ್ರಕರಣದಲ್ಲಿದ್ದರೂ ಅವರ ತಲೆದಂಡ ಆಗಬೇಕು. ಬಡವರಿಗೆ, ದಲಿತರಿಗೆ ಜಾಗ ಕೊಡಲು ಆಗುವುದಿಲ್ಲ. ಲೂಟಿ ಕೋರರಿಗೆ ಜಾಗ ಕೊಡುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ಎಲ್ಲಾ ದರಗಳು ಹೆಚ್ಚಾಗಿವೆ. ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿಗೆ ಹೋಗಿದೆ. ಬೇರೆ ರಾಜ್ಯದ ಚುನಾವಣೆಗೆ ಎಷ್ಟು ಹಣ ಕೊಟ್ಟಿದ್ದಾರೆ, ಇವೆಲ್ಲವೂ ಸಮಗ್ರವಾಗಿ ಬಹಿರಂಗ ಆಗಬೇಕು ಎಂದು ಆಗ್ರಹಿಸಿದರು.