ಮೈಸೂರು : ಕಮಿಷನರ್ ದಯಾನಂದ್ ದಕ್ಷ ಅಧಿಕಾರಿ. ಅಂತಹವರ ಅಮಾನತು ಸರಿಯಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪೊಲೀಸರು ನೈತಿಕತೆಯ ಮುಖವಾಗಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಪಟಾಲಂ ಪಾಪಕ್ಕೆ ಪೊಲೀಸರನ್ನ ಗುರಿ ಮಾಡಿರುವುದು ಮಹಾ ಅಪರಾಧ. ಇದಕ್ಕೆ ಬೆಲೆ ತೆರದಿದ್ದರೆ ಜನರೇ ಪಾಠ ಕಲಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಎಚ್ಚರಿಸಿದರು.
ಹೋಗಿರುವ ಜೀವ ವಾಪಸ್ಸು ಬರುತ್ತಾ?
ಪರಿಹಾರ ಮೊತ್ತ 25 ಲಕ್ಷ ಅಲ್ಲ ಇಡೀ ಬಜೆಟ್ ನ್ನ ಪರಿಹಾರವಾಗಿ ಕೊಟ್ಟರು ಹೋಗಿರುವ ಜೀವ ವಾಪಸ್ ಬರುತ್ತಾ? ಇಡೀ ಘಟನೆಯಿಂದ ಬೆಂಗಳೂರಿಗೆ ಅತ್ಯಂತ ಕೆಟ್ಟ ಹೆಸರು ಬಂದಿದೆ. ಸಿಎಂ ಪಟಲಾಂ ಮಾಡಿದ ಎಡವಟ್ಟಿನಿಂದ ಇಷ್ಟೆಲ್ಲಾ ಘಟನೆಗಳು ನಡೆದಿವೆ. ಸಿದ್ದರಾಮಯ್ಯ ಅವರಿಂದ ನಾವು ಇಂತಹ ಆಡಳಿತ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರಿಸಿದರು.
ರಾಜ್‌ಕುಮಾರ್ ಸಾವಿಗೆ ಈ ಘಟನೆ ಹೋಲಿಕೆ ಸರಿಯಲ್ಲ
ಕಾಲ್ತುಳಿತ ಘಟನೆಗೆ ಡಾ.ರಾಜ್ ಕುಮಾರ್ ಅವರ ಸಾವಿನ ಘಟನೆಯನ್ನ ಹೇಗೆ ಹೋಲಿಕೆ ಮಾಡುತ್ತೀರಾ. ಡಾ.ರಾಜ್ ಕುಮಾರ್ ಅವರ ಸಾವಿನ ಸಂಧರ್ಭವೇ ಬೇರೆ ಅವತ್ತಿನ ಪರಿಸ್ಥಿತಿಯೇ ಬೇರೆ, ಇವತ್ತಿನ ಪರಿಸ್ಥಿತಿಯೇ ಬೇರೆ. ಅವರ ಸಾವಿಗೆ ಈ ಹೋಲಿಗೆ ಸರಿಯಲ್ಲ. ನೀವು ಈಗ ಮಾಡಿರುವುದು ಪಾಪದ ಕೆಲಸ. ಮೊದಲು ಅದನ್ನ ನೀವು ಒಪ್ಪಿಕೊಳ್ಳಬೇಕು. ಕುರ್ಚಿಗೆ ಅಂಟಿಕೊಂಡು ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಅಂದು ಕೊಂಡಿರಲಿಲ್ಲ ಎಂದರು.
ಹಳಿ ತಪ್ಪಿದ ಸರ್ಕಾರ
ಇದು ಹಳಿ ತಪ್ಪಿದ ಸರ್ಕಾರ. ಟ್ರ್ಯಾಕ್ ಇಲ್ಲದೆಯೇ ಓಡುತ್ತಿದೆ. ಅವರ ಒಳ ಒಪ್ಪಂದ ಹೇಗಿದೆಯೋ ಗೊತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಿದ್ದರಾಮಯ್ಯರಿಗೆ ಕೊಟ್ಟಷ್ಟು ಫ್ರೀ ಹ್ಯಾಂಡ್ ಇನ್ನೊಬ್ಬರಿಗೆ ಕೊಟ್ಟಿಲ್ಲ. ಅವರ ವಿವೇಕಕ್ಕೆ ಏನಾಗೊದೆಯೋ ಗೊತ್ತಿಲ್ಲ. ಅಧಿಕಾರಕ್ಕೆ ಜೋತು ಬೀಳದೇ ನೈತಿಕತೆಯಿಂದ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.





