ಮೈಸೂರು: ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳಲ್ಲಿ ಜಾತಿ ವ್ಯವಸ್ಥೆಯು ಒಂದು. ಜಾತಿ ವ್ಯವಸ್ಥೆ ಹಾಗೂ ಅಸ್ಪಶ್ಯತೆ ನಿರ್ಮೂಲನೆಗೆ ಕಾನೂನುಗಳಿದ್ದರು, ಇಂದಿಗೂ ಬಹುತೇಕ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಮುಂದುವರಿದಿದೆ. ಅದೇ ರೀತಿ, ಮೈಸೂರು ತಾಲೂಕಿನ ಕಿರಾಳು ಗ್ರಾಮದಲ್ಲೂ ಅಸ್ಪೃಶ್ಯತೆ ಆಚರಣೆ ಬೆಳಕಿಗೆ ಬಂದಿದೆ.
ಜಿಲ್ಲೆಯ ವರಣಾದ ಕಿರಾಳು ಗ್ರಾಮದ ಶಂಭುಮಹಾಲಿಂಗೇಶ್ವರ ದೇವಸ್ಥಾನಕ್ಕೆ ದಲಿತರು ಪ್ರವೇಶಿಸಲು ಅರ್ಚಕರು ಹಾಗೂ ಗ್ರಾಮಸ್ಥರು ಅವಕಾಶ ನೀಡದೇ ಅಸ್ಪೃಶ್ಯತೆ ಆಚರಿಸಿದ್ದಾರೆ. ಈ ಬಗ್ಗೆ ಗ್ರಾಮದ ನವೀನ್ ಎಂಬುವವರು ತಹಶೀಲ್ದಾರ್ ಮಹೇಶ್ ಕುಮಾರ ಅವರಿಗೆ ದೂರು ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ತಹಶೀಲ್ದಾರ್, ವರುಣಾ ಪಿಎಸ್‌ಐ ಚೇತನ್ ಹಾಗೂ ಇತರ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಸ್ಪೃಶ್ಯತೆ ಆಚರಿಸದಂತೆ ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ್ ಅವರು ಗ್ರಾಮಸ್ಥರ ಮನವೊಲಿಸಿ ನಿರ್ಬಂಧ ಹೇರಿದ್ದ ನವೀನ್ ಅವರಿಗೆ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಿದರು. ಅಧಿಕಾರಿಗಳ ಸಮ್ಮುಖದಲ್ಲೇ ನವೀನ್ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಬಳಿಕ ಅಧಿಕಾರಿಗಳು ದೇವಸ್ಥಾನದ ಆವರಣದಲ್ಲೇ ಸಭೆ ಕರೆದು ಅಸ್ಪೃಶ್ಯತೆ ಆಚರಿಸದಂತೆ ಜಾಗೃತಿ ಮೂಡಿಸುವ ಮೂಲಕ ಗ್ರಾಮಸ್ಥರಿಗೆ ವಾರ್ನಿಂಗ್ ನೀಡಿದ್ದಾರೆ.
ತಹಶೀಲ್ದಾರ್ ಮಹೇಶ್ ಕುಮಾರ್, ಉಪ ತಹಶೀಲ್ದಾರ್ ಲತಾ ಶರಣಮ್ಮ, ಗ್ರಾಮ ಆಡಳಿತಾಧಿಕಾರಿ ಕೀರ್ತಿ ಕುಮಾರ್ ಮತ್ತು ಅಬ್ದುಲ್ ರಶೀದ್ ಗ್ರಾಮಕ್ಕೆ ತೆರಳಿ ಅಸ್ಪೃಶ್ಯತೆಗೆ ಕಡಿವಾಣ ಹಾಕಿದ್ದಾರೆ.
ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಳ್ಳುವ ಭಾರತದಲ್ಲಿ ಈಗಲೂ ಅಸ್ಪೃಶ್ಯತೆ ಆಚರಣೆ ಕಂಡುಬರುವುದು ಶೋಚನಿಯ. ಅದರಲ್ಲೂ ಮೌಡ್ಯಾರಚಣೆ ಹಾಗೂ ಅನಿಷ್ಠ ಪದ್ಧತಿಗಳ ವಿರುದ್ಧ ಮಾತನಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪನವರ ತಾಲೂಕಿನಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ವಿಪರ್ಯಾಸವೇ ಸರಿ.