ಮೈಸೂರು: ಭಾರತೀಯ ರಾಷ್ಟ್ರೀಯ ಬಾರ್ ಅಸೋಸಿಯೇಷನ್ (ಐಎನ್‌ಬಿಎ) ಕೊಡಮಾಡುವ ಪ್ರತಿಷ್ಠಿತ ‘ಫಿನಾಮಿನಲ್ ಶೀ’ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ಸ್ ಮತ್ತು ಜೀನೋಮಿಕ್ಸ್ ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್ ಮಾಲಿನಿ ಅವರು ಭಾಜನರಾಗಿದ್ದಾರೆ.
ಐಎನ್‌ಬಿಎ ಪ್ರಶಸ್ತಿ ಪ್ರಧಾನ ಏಳನೇ ಆವೃತ್ತಿಯು ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮುಂಚೂಣಿಯರನ್ನು ಗುರುತಿಸಿ ಹೊಸದಿಲ್ಲಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಾನವ ತಳಿ ಶಾಸ್ತ್ರದ ಸಂಶೋಧನೆಯಲ್ಲಿ ಅಪೂರ್ವ ಸಾಧನೆ ಹಾಗೂ ಸಾರ್ವಜನಿಕರಿಗೆ ಅನುವಂಶಿಯ ಕಾಯಿಲೆಗಳ ಬಗ್ಗೆ ಅರಿವು, ಕನ್ನಡದಲ್ಲಿ ಅನುವಂಶಿ ಕಾಯಿಲೆಗಳ ಬಗ್ಗೆ ಪುಸ್ತಕಗಳ ರಚನೆ ಹಾಗೂ ಆರೋಗ್ಯದ ಬಗ್ಗೆ ಅರಿವನ್ನು ನೀಡುತ್ತಿರುವುದನ್ನು ಪರಿಗಣಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು, ದೈಹಿಕ, ಮಾನಸಿಕ, ಸಾಮಾಜಿಕ, ಲೈಂಗಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುತ್ತಿರುವ ಸಮಾಜಮುಖಿ ಕೆಲಸಕ್ಕಾಗಿ ಡಾ.ಸುತ್ತೂರು ಎಸ್ ಮಾಲಿನಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.