ನಂಜನಗೂಡು: ತಾಲ್ಲೂಕಿನ ಚಿಕ್ಕಯ್ಯನ ಛತ್ರ ಗ್ರಾಮದ ಪ್ರಸನ್ನ ನಂಜುಂಡೇಶ್ವರ ದೇವಾಲಯಲ್ಲಿ ಯುಗಾದಿ ಹೋಕುಳಿ ಉತ್ಸವ ಅದ್ಧೂರಿಯಾಗಿ ನೆರವೇರಿತು.
ಮೊದಲಿಗೆ ಕಪಿಲಾ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸಿ, ವಾದ್ಯಗೋಷ್ಠಿ ಮೂಲಕ ಹೆಣ್ಣು ಮಕ್ಕಳು ತಲೆ ಮೇಲೆ ಕಳಸ ಹೊತ್ತು ತಂದರು. ಪ್ರಸನ್ನ ನಂಜುಂಡೇಶ್ವರ ದೇವಾಲಯದ ಮುಂಭಾಗದಲ್ಲಿರುವ ಕೊಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವರ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ, ಈ ಬಾರಿಗೆ ಒಳ್ಳೆಯ ಮಳೆ ಬೆಳೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಗಂಗೆಯನ್ನು ಕೊಳದಲ್ಲಿ ಹಾಕುವ ಮೂಲಕ ಹೋಕುಳಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಹುಡುಗರು ಹಾಗೂ ಅಲ್ಲಿ ನೆರೆದಿದ್ದ ಸಾರ್ವಜನಿಕರು ಓಕುಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಹೋಕುಳಿ ಉತ್ಸವದಲ್ಲಿ ನೂರಾರು ಮಂದಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.





