ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ರೈತರು ಹೊನ್ನೇರು ಕಟ್ಟಿ ಭೂಮಿ ತಾಯಿಯನ್ನು ಪೂಜಿಸಿದ್ದಾರೆ.
ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿ ಜಮೀನುಗಳಿಗೆ ಗೊಬ್ಬರ ಹಾಕುವ ಮೂಲಕ ಹೊಸ ವರ್ಷದ ದಿನ ಕೃಷಿ ಚಟುವಟಿಕೆ ಆರಂಭಿಸಿ ಬೆಳೆ ಚೆನ್ನಾಗಿ ಬಂದು ನೆಮ್ಮದಿಯ ಜೀವನ ಸಿಗಲೆಂದು ಬೇಡುವುದು ಸಂಪ್ರದಾಯವಾಗಿದೆ.
ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಎತ್ತುಗಳನ್ನು ತೊಳೆದು ಅವುಗಳಿಗೆ ಬಣ್ಣ ಬಳಿದು ಸಿಂಗರಿಸಿ, ಕೊಟ್ಟಿಗೆ ಗೊಬ್ಬರಕ್ಕೆ ಪೂಜೆ ಸಲ್ಲಿಸುತ್ತಾ, ತಮ್ಮ ಜಮೀನುಗಳಿಗೆ ಹೋಗಿ, ಗೊಬ್ಬರವನ್ನು ಹಾಕಿ ಈ ಬಾರಿ ಒಳ್ಳೆಯ ಫಸಲು ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.





