ನಂಜನಗೂಡು: ಸಿಸಿ ಕ್ಯಾಮರಾ ಸುಳಿವು ಆಧರಿಸಿ ಇಬ್ಬರು ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ನಂಜನಗೂಡು ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನ ಕೆಸರೆ ನಿವಾಸಿಗಳಾದ ಸುಲೇಮಾನ್ ಹಾಗೂ ಸಿದ್ದಿಕ್ ಪಾಷಾ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ನಂಜನಗೂಡು ಪಟ್ಟಣ ಮಾತ್ರವಲ್ಲದೆ ಹೆಚ್.ಡಿ.ಕೋಟೆ, ಬಿಳಿಗೆರೆ, ಟಿ.ನರಸೀಪುರ, ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಖದೀಮರು ಜಾನುವಾರು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ನಂಜನಗೂಡು ಟೌನ್ ಠಾಣೆ ಪೊಲೀಸರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಹಲವು ಕಡೆ ಹಸುಗಳನ್ನು ಕಳ್ಳತನ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.





